News Karnataka Kannada
Saturday, April 13 2024
Cricket
ವಿಶೇಷ

ವರುಣನ ಕೃಪೆಗಾಗಿ ನಡೆಯುವ ಮದುವೆಗಳ ಬಗ್ಗೆ ಗೊತ್ತಾ?

Do you know about marriages that take place for the grace of Varuna?
Photo Credit : By Author

ಮಳೆ ಸುರಿಯದಿರಲು ವೈಜ್ಞಾನಿಕವಾಗಿ ಹಲವು ಕಾರಣಗಳು ಇಲ್ಲದಿಲ್ಲ. ಆದರೆ ಬಾರದೆಯಿದ್ದಾಗ ನಾವೆಲ್ಲರೂ ಬೇರೆ ದಾರಿ ಕಾಣದೆ ದೇವರ ಮೊರೆ ಹೋಗುವುದು, ವಿವಿಧ ಪೂಜೆ ಪುರಸ್ಕಾರಗಳನ್ನು ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಮಳೆ ಬಾರದಿದ್ದಾಗ ಮಳೆಗಾಗಿ ನಮ್ಮ ಪೂರ್ವಜರು ಹಲವು ರೀತಿಯ ಪೂಜಾ ಕ್ರಮಗಳೊಂದಿಗೆ ಯಜ್ಞಗಳನ್ನು ಮಾಡುತ್ತಿದ್ದರು. ಜತೆಗೆ ಕೆಲವೆಡೆ ಮಳೆಗಾಗಿ ವಿವಿಧ ಬಗೆಯ ಮದುವೆಗಳನ್ನು ಮಾಡುತ್ತಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ.

ಹಾಗಾದರೆ ಮಳೆಗಾಗಿ ಯಾವುದೆಲ್ಲ ಮದುವೆಗಳನ್ನು ಮಾಡುತ್ತಿದ್ದರು ಎನ್ನುವುದನ್ನು ನೋಡುತ್ತಾ ಹೋದರೆ ಕಪ್ಪೆ, ಕತ್ತೆ, ಅರಳಿ ಬೇವಿಗೆ, ಗಂಡುಮಕ್ಕಳಿಗೆ ಮದುವೆ ಮಾಡುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ. ಇದು ಮೇಲ್ನೋಟಕ್ಕೆ ಮೂಢನಂಬಿಕೆಯಂತೆ ಕಂಡು ಬರಬಹುದು. ಆದರೆ ಇದನ್ನು ಜನರು ನಂಬಿಕೆಯಿಂದಲೇ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ.

ಇತ್ತೀಚೆಗೆಯಷ್ಟೆ ಮಂಡ್ಯದಲ್ಲಿ ಗಂಡುಮಕ್ಕಳಿಗೆ ಮದುವೆ ಮಾಡುವ ಮೂಲಕ ಮಳೆಯ ಜಪ ಮಾಡಿದ್ದಾರೆ. ಇದು ಬಹಳ ಸುದ್ದಿಯಾಗಿದೆ. ಕೆಲವರು ಈ ಬಗ್ಗೆ ತಮ್ಮದೇ ಆದ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಆದರೆ ಇದರ ಹಿಂದೆ ಹಳ್ಳಿಗರ ನಂಬಿಕೆ, ಶ್ರದ್ಧೆ ಇದೆ ಎನ್ನುವುದಂತು ಸತ್ಯ. ಇಷ್ಟಕ್ಕೂ ಈ ಮದುವೆ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಿದರೆ, ಇಬ್ಬರು ಗಂಡು ಮಕ್ಕಳಿಗೆ ಹೆಣ್ಣು-ಗಂಡಿನ ವೇಷ ತೊಡಿಸಿ ವಧು-ವರರನ್ನಾಗಿ ಸಿಂಗರಿಸಿ ಅವರಿಗೆ ವಿವಾಹ ಮಾಡಿ ಬೆಳದಿಂಗಳಲ್ಲಿ ಮೆರವಣಿಗೆ ಮಾಡಿ ಮಳೆಗಾಗಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ರಾತ್ರಿಯಿಡೀ ಮಳೆಗಾಗಿ ಹಾಡುಗಳನ್ನು ಹಾಡುತ್ತಾ ವರುಣನನ್ನು ಜಪಿಸುತ್ತಾರೆ.

ಇನ್ನು ಕಪ್ಪೆ ಮದುವೆ ಮಾಡುವ ಸಂಪ್ರದಾಯದಲ್ಲಿ ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಗಂಡು ಕಪ್ಪೆಗೆ ಯುವಕರು ಅಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪೆಗೆ ಶೃಂಗಾರ ಮಾಡಿ, ನಂತರ ಮುತ್ತೈದೆಯರು ಕಳಸ ಹೊತ್ತುಕೊಂಡು ನೀರು ತರುವ ಶಾಸ್ತ್ರಕ್ಕೆ ಮುಂದಾಗುತ್ತಾರೆ. ಇದರ ಜತೆಗೆ ಗಂಡು ಕಪ್ಪೆಗೆ ಯುವಕರು ಹಸೆಮಣೆ ಏರಿಸುವ ಶಾಸ್ತ್ರ ಮಾಡುತ್ತಾರೆ.

ಇದಾದ ಬಳಿಕ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ಯುತ್ತಾರೆ. ಆಗ ಹೆಣ್ಣು ಕಪ್ಪೆಯ ಕಡೆಯವರು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮಾಡುತ್ತಾರೆ. ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೈದೆಯರು ನವ ವಧು ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬುತ್ತಾರೆ.

ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸುತ್ತಾರೆ. ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮುತ್ತೈದೆಯರು ನೂತನ ವಧುವರರಿಗೆ ಶುಭ ಹಾರೈಸುತ್ತಾರೆ. ಇದಾದ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಅರತಕ್ಷತೆ ನಡೆಸುತ್ತಾರೆ ಆ ಮೂಲಕ ಮಳೆರಾಯನನ್ನು ಜಪಿಸುತ್ತಾರೆ.

ಕತ್ತೆಗಳಿಗೆ ನಡೆಯುವ ಮದುವೆಯಲ್ಲಿ ಗಂಡು ಹೆಣ್ಣು ಕತ್ತೆಗಳೊಂದಿಗೆ ದೇವಸ್ಥಾನಕ್ಕೆ ತೆರಳುವ ಹಿರಿಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶುಭಲಗ್ನದಲ್ಲಿ ದೇಗುಲದ ಪೂಜಾರಿ ಅರಿಶಿಣದ ಕೊಂಬಿನ ತಾಳಿಯನ್ನು ಗ್ರಾಮದ ವ್ಯಕ್ತಿಯೊಬ್ಬನ ಮೂಲಕ ಕತ್ತೆಗೆ ಕಟ್ಟಿಸಿ ಮದುವೆ ಮಾಡಿಸುತ್ತಾರೆ. ಇದೇ ವೇಳೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ನಂತರ ಎಲ್ಲರೂ ಒಂದೆಡೆ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭ ಪ್ರತಿ ಮನೆಯಲ್ಲೂ ಮಹಿಳೆಯರು ಕತ್ತೆಗಳಿಗೆ ಆರತಿ ಎತ್ತಿ ಪೂಜೆ ಸಲ್ಲಿಸುತ್ತಾರೆ. ದಾರಿಯುದ್ದಕ್ಕೂ ತಮಟೆ ಬಡಿಯುತ್ತಾ, ಕುಣಿಯುತ್ತಾ ಯುವಕರು ಮಕ್ಕಳು ಮದುವೆಯ ಮೆರವಣಿಗೆಗೆ ಜೀವ ತುಂಬುತ್ತಾರೆ.

ಮನುಷ್ಯ, ಪ್ರಾಣಿ, ಜೀವಚರಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಕೃತಿಯಲ್ಲಿರುವ ಅರಳಿಮರ ಮತ್ತು ಬೇವಿನಮರಕ್ಕೂ ಮದುವೆ ಮಾಡಿಸುವ ಸಂಪ್ರದಾಯವೂ ಇದೆ. ಈ ಮದುವೆಯಲ್ಲಿ ಮಹಿಳೆಯರು ಕಳಶಗಳನ್ನು ತಂದು ಪೂಜೆ ಮಾಡಿ ಅರಳಿಮರ (ವರ) ಮತ್ತು ಬೇವಿನಮರ(ವಧು)ಗಳನ್ನು ಸಿಂಗಾರ ಮಾಡಿ ಮನೆತುಂಬಿಸುವ ಶಾಸ್ತ್ರವನ್ನು ಮಾಡಲಾಗುತ್ತದೆ. ಇದೇ ವೇಳೆ ಬಳೆ ತೊಡಿಸುವ ಶಾಸ್ತ್ರವೂ ನಡೆಯುತ್ತದೆ. ಬಳಿಕ ಮಂಗಳವಾದ್ಯದೊಂದಿಗೆ ತಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುತೈದೆಯರು ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಪುರೋಹಿತರು ಮಂತ್ರಗಳನ್ನು ಪಠಿಸಿ ಮಾಂಗಲ್ಯಧಾರಣೆಯೊಂದಿಗೆ ಮದುವೆ ಮಾಡಿಸುತ್ತಾರೆ. ಇಷ್ಟು ಆದ ಬಳಿಕ ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆಯೂ ಮಾಡಲಾಗುತ್ತದೆ.

ಈ ಮದುವೆಗಳನ್ನು ನಾವು ಮೂಢನಂಬಿಕೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಪೂರ್ವಜರು ಇಂತಹ ಸಂಪ್ರದಾಯ ಮಾಡಿದ್ದಾರೆ ಎನ್ನುವುದಾದರೆ ಅನುಭವದಿಂದಲೇ ಮಾಡಿರುತ್ತಾರೆ ಎಂಬ ವಿಚಾರವನ್ನು ತಳ್ಳಿಹಾಕುವಂತಿಲ್ಲ. ಅದು ಏನೇ ಇರಲಿ ಪ್ರಕೃತಿಯನ್ನು ಕಾಪಾಡುವುದು ನಾವು ಮಾಡಬೇಕಾದ ಕೆಲಸವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು