Bengaluru 29°C
Ad

33 ವರ್ಷಗಳ ನಂತರ 100 ಟನ್‌ಗೂ ಅಧಿಕ ಚಿನ್ನ ಭಾರತಕ್ಕೆ ರವಾನೆ

ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ಗೂ ಅಧಿಕ ಚಿನ್ನವನ್ನು ದೇಶಿಯ ಖಜಾನೆ ಗಳಿಗೆ ರವಾನಿಸಿದೆ.

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ಗೂ ಅಧಿಕ ಚಿನ್ನವನ್ನು ದೇಶಿಯ ಖಜಾನೆ ಗಳಿಗೆ ರವಾನಿಸಿದೆ.

ಕಳೆದ 33ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ಭಾರತಕ್ಕೆ ಬರುತ್ತಿರುವುದು. ಮುಂದಿನ ದಿನಗಳಲ್ಲಿ ಇಷ್ಟೇ ಮೊತ್ತ ಚಿನ್ನವನ್ನು ಆರ್‌ಬಿಐ ಭಾರತಕ್ಕೆ ತರಲಿದೆ.

ಈ ಚಿನ್ನವನ್ನು ಕೆಲವೊಂದು ವ್ಯವಸ್ಥಾಪನಾ ಕಾರಣ ಮತ್ತು ವೈವಿಧ್ಯಮಯ ಸಂಗ್ರಹಣೆ ಉದ್ದೇಶದಿಂದ ದೇಶಿಯ ಖಜಾನೆಗಳಿಗೆ ತರಲಾಗುತ್ತಿದೆ.

ಮಾರ್ಚ್ 2023 ರ ಮಾಹಿತಿಯ ಪ್ರಕಾರ, ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು, ಅದರಲ್ಲಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ.

ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಆರ್‌ಬಿಐ ಚಿನ್ನ ಸಂಗ್ರಹಣೆಯನ್ನು ಹೆಚ್ಚಿಸಿದೆ.

ಅನೇಕ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಇರಿಸುತ್ತವೆ. ಇದರಲ್ಲಿ ಭಾರತವೂ ಒಂದು. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇರಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಆರ್‌ಬಿಐ ಚಿನ್ನ ಖರೀದಿಸಲು ಆರಂಭಿಸಿತು ಮತ್ತು ಅದನ್ನು ಎಲ್ಲಿ ಸಂಗ್ರಹಿಸಬೇಕು ಎಂದು ನಿರ್ಧರಿಸಿತು. ವಿದೇಶದಲ್ಲಿ ಚಿನ್ನದ ದಾಸ್ತಾನು ಹೆಚ್ಚುತ್ತಿರುವ ಕಾರಣ ಭಾರತಕ್ಕೆ ಸ್ವಲ್ಪ ಚಿನ್ನವನ್ನು ತರಲು ನಿರ್ಧರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬದಲಾಗುತ್ತಿರುವ ರಾಜಕೀಯ ಸಂಗತಿಗಳು ಮತ್ತು ಕರೆನ್ಸಿ ಮೌಲ್ಯ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈ ಈ ಚಿನ್ನವನ್ನು ಭಾರತಕ್ಕೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಒಂದೇ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಚಿನ್ನವನ್ನು ಭಾರತಕ್ಕೆ ತರುತ್ತಿರುವ ಬಗ್ಗೆ ಪ್ರಸಿದ್ದ ಆರ್ತಿಕ ತಜ್ಞ ಸಂಜೀವ್‌ ಸನ್ಯಾಲ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾರಿಗೂ ತಿಳಿಯದಂತೆ ಆರ್‌ಬಿಐ ತನ್ನ 100 ಟನ್ ಚಿನ್ನದ ನಿಕ್ಷೇಪಗಳನ್ನು ಯುಕೆಯಿಂದ ಭಾರತಕ್ಕೆ ಹಿಂತಿರುಗಿಸಿದೆ. ಹೆಚ್ಚಿನ ದೇಶಗಳು ತಮ್ಮ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಅಥವಾ ಅಂತಹ ಕೆಲವು ಸ್ಥಳಗಳ ಖಜಾನೆಗಳಲ್ಲಿ ಇರಿಸುತ್ತವೆ. ಭಾರತವು ಈಗ ತನ್ನ ಹೆಚ್ಚಿನ ಚಿನ್ನವನ್ನು ತನ್ನದೇ ಆದ ಖಜಾನೆಗಳಲ್ಲಿ ಇಟ್ಟುಕೊಳ್ಳುತ್ತದೆ.

1991 ರಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಮಧ್ಯೆ ನಾವು ರಾತ್ರೋರಾತ್ರಿ ಚಿನ್ನವನ್ನು ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಬರೆದುಕೊಂಡಿದ್ದಾರೆ.

 

 

Ad
Ad
Nk Channel Final 21 09 2023
Ad