Bengaluru 21°C
Ad

ಕಳ್ಳತನಕ್ಕೆ ಯತ್ನಿಸಿದವನಿಗೆ ಜನರಿಂದ ಥಳಿತ; ಯುವಕ ಸಾವು

ಪ್ರತಾಪ್‌ ನಗರದಲ್ಲಿ ಗುರುವಾರ ತಡರಾತ್ರಿ ಮನೆ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಯುವಕನಿಗೆ ಸ್ಥಳೀಯರು ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಬೀದರ್‌: ಇಲ್ಲಿನ ಪ್ರತಾಪ್‌ ನಗರದಲ್ಲಿ ಗುರುವಾರ ತಡರಾತ್ರಿ ಮನೆ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಯುವಕನಿಗೆ ಸ್ಥಳೀಯರು ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ನೌಬಾದ್‌ ನಿವಾಸಿ ಸಂತೋಷ ನಾಗೂರೆ (30) ಮೃತ ಯುವಕ. ಆತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

‘ಸಂತೋಷ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನ ಸಾವಿಗೆ ಕಾರಣರಾದ ಪ್ರತಾಪ್‌ ನಗರದ ಗೋರಖನಾಥ್‌ ಮಾಣಿಕರಾವ್‌ ಸೋಮುರೆ, ಅಶೋಕ್‌ ಶರಣಪ್ಪ ಮೇತ್ರೆ, ಶ್ರೀನಿವಾಸ್‌ ಲಾಲಪ್ಪ ಹಾಗೂ ಆಸ್ಟಿನ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಐದನೇ ವ್ಯಕ್ತಿ ಪತ್ತೆ ಕಾರ್ಯ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿರುವ ಸಂತೋಷ ನಾಗೂರೆ ಹಾಗೂ ಆತನ ಮೂವರು ಗೆಳೆಯರಾದ ಸತೀಶ್‌, ಅಬ್ರಾಹಂ ಹಾಗೂ ಅಂಬರೀಶ್‌ ಅವರೊಂದಿಗೆ ಗುರುವಾರ ತಡರಾತ್ರಿ ಪ್ರತಾಪ್‌ ನಗರದಲ್ಲಿ ಮನೆ ಕಳ್ಳತನಕ್ಕೆ ಹೋಗಿದ್ದರು. ಗೋರಖನಾಥ್‌ ಎಂಬುವರ ಮನೆಯಲ್ಲಿ ಕಳವು ಮಾಡುವಾಗ ಸ್ಥಳೀಯರ ಕೈಗೆ ಸಂತೋಷ್‌ ಸಿಕ್ಕಿಬಿದ್ದಿದ್ದಾನೆ. ಮೂವರು ಗೆಳೆಯರು ಅಲ್ಲಿಂದ ಓಡಿ ಹೋಗಿದ್ದಾರೆ. ಗೋರಖನಾಥ್‌ ಮಾಣಿಕರಾವ್‌ ಸೋಮುರೆ, ಅಶೋಕ್‌ ಶರಣಪ್ಪ ಮೇತ್ರೆ, ಶ್ರೀನಿವಾಸ್‌ ಲಾಲಪ್ಪ, ಆಸ್ಟಿನ್‌ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿಕೊಂಡು ಸಂತೋಷ್‌ನಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಸಂತೋಷ್‌ನ ತಲೆ, ಕೈಕಾಲು, ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್‌ನನ್ನು ಆನಂತರ ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ನಸುಕಿನ ಜಾವ 5:10ಕ್ಕೆ ಸಂತೋಷ್‌ ಮೃತಪಟ್ಟಿದ್ದಾನೆ. ‘ಕೊಲೆ ಮಾಡುವ ಉದ್ದೇಶದಿಂದಲೇ ನನ್ನ ಕಿರಿಯ ಮಗನನ್ನು ಈ ರೀತಿ ಹೊಡೆದಿದ್ದಾರೆ’ ಎಂದು ಮೃತನ ತಾಯಿ ಕಮಳಮ್ಮ ರಾಮಣ್ಣ ನಾಗೂರೆ ದೂರು ಕೊಟ್ಟಿದ್ದು, ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸಮೀಪದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Ad
Ad
Nk Channel Final 21 09 2023
Ad