ಪಾಟ್ನಾ: ಉತ್ತರ ಭಾರತದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಬಿಹಾರದ ಬಹುತೇಕ ಸ್ಥಳಗಳಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ. ಬಕ್ಸಾರ್ನಲ್ಲಿ ಗುರುವಾರ ದಾಖಲೆಯ 47.1 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಂದಿ ಚುನಾವಣಾ ಮತಗಟ್ಟೆ ಸಿಬ್ಬಂದಿ ಸೇರಿದಂತೆ 14 ಜನರು ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆಯ ಹೇಳಿಕೆಯ ಪ್ರಕಾರ, ಈ ಸಾವುಗಳಲ್ಲಿ ಹೆಚ್ಚಿನವು ಭೋಜ್‌ಪುರದಲ್ಲಿ ಸಂಭವಿಸಿವೆ. ಅಲ್ಲಿ 5 ಚುನಾವಣಾ ಕರ್ತವ್ಯ ಅಧಿಕಾರಿಗಳು ಬಿಸಿಲ ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ.
ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು ಮತ್ತು ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧೆಡೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಒಂದೇ ದಿನದಲ್ಲಿ 14 ಮಂದಿ ಸಾವನ್ನಪ್ಪುವ ಮೂಲಕ ಬಿಸಿಗಾಳಿಯಿಂದ ಬಿಹಾರದಾದ್ಯಂತ ಇದುವರೆಗೂ ಒಟ್ಟು 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.