Bengaluru 24°C
Ad

ಆತ್ಮೀಯತೆಯನ್ನು ಗಳಿಸುವುದು ತುಂಬಾ ಕಷ್ಟ: ಡಾ.ಡಿ. ವೀರೇಂದ್ರ ಹೆಗ್ಗಡೆ

ರಾಷ್ಟ್ರೀಯತೆಯೊಂದಿಗೆ ಮಕ್ಕಳಲ್ಲಿ ದೇಶ ಭಕ್ತಿಯನ್ನು ಮೂಡಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಸರ್ವ ಧರ್ಮಗಳ ಭಾವನೆ ಬರುವಂತೆ ವಿದ್ಯೆಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.

ಕಾರ್ಕಳ : ವಿದ್ಯೆಯ ಜೊತೆಯಲ್ಲಿ ಕಲೆ, ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದ ಅಪರೂಪದ ವ್ಯಕ್ತಿ ಆಳ್ವರು. ರಾಷ್ಟ್ರೀಯತೆಯೊಂದಿಗೆ ಮಕ್ಕಳಲ್ಲಿ ದೇಶ ಭಕ್ತಿಯನ್ನು ಮೂಡಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಸರ್ವ ಧರ್ಮಗಳ ಭಾವನೆ ಬರುವಂತೆ ವಿದ್ಯೆಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಆತ್ಮೀಯತೆಯನ್ನು ಗಳಿಸುವುದು ತುಂಬಾ ಕಷ್ಟ ಆದರೆ ಆಳ್ವರು ಎಲ್ಲರಿಗೂ ಆತ್ಮೀಯರಾಗಿದ್ದಾರೆ. ಅವರೊಬ್ಬ ಮಹಾನ್ ಆಳ್ವರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಕಾರ್ಕಳ ಗಣಿತನಗರದ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಡಾ. ಎಂ. ಮೋಹನ್ ಆಳ್ವರ ಅಭಿನಂದನಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.

ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಜನ್ಮದಲ್ಲಿ ಎಂದೂ ನಾನು ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ನಾನು ಏನು ಸಾಧನೆಯನ್ನು ಮಾಡಿದರೂ ಯಾವುದೇ ದಾಖಲೆಯನ್ನು ಇಟ್ಟುಕೊಂಡಿಲ್ಲ. ನಾನೊಬ್ಬ ಹಳ್ಳಿಯ ಜನಪದ ಪಾಡ್ದನ ಕಲಾವಿದನಿದ್ದಂತೆ. ನಾನು ಬುದ್ದಿವಂತನಲ್ಲ. ಪಿಯುಸಿಯಲ್ಲಿ ಫೇಲ್ ಆದವ. ದಡ್ಡನಾ ಎಂದು ಕೇಳಿದರೇ ದಡ್ಡ ಎಂದು ಒಪ್ಪಿಕೊಳ್ಳಲು ಎಂದು ಸಿದ್ದನಿಲ್ಲ. ನಿತ್ಯ ವಿದ್ಯಾರ್ಥಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ವಿದ್ಯೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಇಷ್ಟು ಸಾಧನೆಯನ್ನು ಮಾಡಲು ಸಾಧ್ಯವಾಯಿತು. ನಾವೆಲ್ಲ ಯಾವುದೇ ಫಲಾಪೇಕ್ಷವಿಲ್ಲದ ಕೆಲಸವನ್ನು ಮಾಡಬೇಕು.ವ್ಯಕ್ತಿತ್ವದಲ್ಲಿ ಎಂದೂ ವ್ಯಾಪಾರ ಮನೋಭಾವ ಬೆಳೆಯಬಾರದು ಎಂದರು.

ಇದೇ ಸಂದರ್ಭದಲ್ಲಿ ಆಳ್ವರಿಗೆ 72 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಸವ್ಯಸಾಚಿ ಪುಸ್ತಕದ ಅನಾವರಣ ನಡೆಯಿತು.ಹಾಗೂ ಆಳ್ವರ ಹುಟ್ಟುಹಬ್ಬದ ಪ್ರಯುಕ್ತ ಅನಾರೋಗ್ಯದಿಂದ ಬಳಲುತ್ತಿರುವ 10 ಮಂದಿ ಹಾಗೂ 5 ಸಮಾಜ ಸೇವಾ ಸಂಸ್ಥೆಗಳಿಗೆ ತಲಾ 10 ಸಾವಿರದಂತೆ ಆರ್ಥಿಕ ನೆರವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಯಿತು. ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗೊಳಗಾಗುವ ರೋಗಿಗಳ ಶುಶ್ರೂಷೆಗಾಗಿ ರೂ.2ಲಕ್ಷ ಚೆಕ್ ಹಸ್ತಾಂತರ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಮಾತನಾಡಿ ಆಳ್ವರು ವಿದ್ಯಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಅವರು ಜೀವನದಲ್ಲಿ ಎಷ್ಟು ಸುಖ ಕಂಡಿದ್ದಾರೋ ಅಷ್ಟೇ ಕಷ್ಟವನ್ನು ಕಂಡಿದ್ದಾರೆ. ಆಳ್ವರನ್ನು ಮಗನ ರೂಪದಲ್ಲಿ ಕಾಣುತ್ತೇನೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮಾಜದಲ್ಲಿ ಎಲ್ಲರನ್ನು ಸವ್ಯ ಸಾಚಿ ಎನ್ನಲು ಸಾಧ್ಯವಿಲ್ಲ. ಎಲ್ಲ ರಂಗದಲ್ಲಿ ಯಶಸ್ಸು ಕಂಡವರು ಆಳ್ವರು. ಎಲ್ಲಾ ಕ್ಷೇತ್ರದಲ್ಲಿ ಮೋಹನ ಆಳ್ವರ ಕೊಡುಗೆಯಿದೆ. ಅವರನ್ನು ಗುರುತಿಸುವುದೆಂದರೆ ಕಲೆ, ಸಾಹಿತ್ಯ, ಸಂಸ್ಕೃತಿ, ರಾಷ್ಟ್ರೀಯತೆಯನ್ನು ಗೌರವಿಸಿದಂತೆ. ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿತ ಪರಿಣಾಮ ಹಾಗೂ ಕಲೆ ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯಿಂದ ಮೂಡಬಿದಿರೆ ನಾಡಿನಲ್ಲಿ ಗುರುತಿಸುವಂತಾಗಿದೆ.

ಸಮಾರಂಭದಲ್ಲಿ ಮಾಜಿ ಗೃಹ ಸಚಿವ ಪಿ.ಜಿ ಆರ್ ಸಿಂಧ್ಯಾ, ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕ ಶರತ್ ಆಚಾರ್ಯ ತತ್ವಗೀತೆಯನ್ನು ಹಾಡಿ, ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅನಿಲ್ ಕುಮಾರ್ ವಂದಿಸಿದರು.

Ad
Ad
Nk Channel Final 21 09 2023
Ad