Bengaluru 22°C
Ad

ಧೂಮಪಾನಿಗಳೇ  ಸಿಗರೇಟ್ ಸೇದುವ ಮುನ್ನ ನೂರು ಬಾರಿ ಯೋಚಿಸಿ…

ಮೇ.31ನ್ನು ವಿಶ್ವ ತಂಬಾಕು ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ತಂಬಾಕು ಮನುಷ್ಯನ ಆರೋಗ್ಯದ  ಮೇಲೆ  ಬೀರುತ್ತಿರುವ ಪರಿಣಾಮಗಳಾಗಿವೆ.

ಮೇ.31ನ್ನು ವಿಶ್ವ ತಂಬಾಕು ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ತಂಬಾಕು ಮನುಷ್ಯನ ಆರೋಗ್ಯದ  ಮೇಲೆ  ಬೀರುತ್ತಿರುವ ಪರಿಣಾಮಗಳಾಗಿವೆ. ತಂಬಾಕನ್ನು ಕೆಲವರು ನೇರವಾಗಿ ಬಾಯಿಗೆ ಹಾಕಿ ಅಗೆಯುವ ಮೂಲಕ ಸೇವಿಸಿದರೆ ಇನ್ನು ಕೆಲವರು ಸಿಗರೇಟ್ ಮತ್ತು ಬೀಡಿಗಳ ಮೂಲಕ ಹೊಗೆ ಸೇವನೆ ಮಾಡುತ್ತಾರೆ. ಇಲ್ಲಿ ಯಾವ ರೀತಿಯಲ್ಲಿ ಉಪಯೋಗಿಸಿದರೂ ಅದು ಆರೋಗ್ಯಕ್ಕೆ ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇತ್ತೀಚೆಗಿನ ದಿನಗಳಲ್ಲಿ ವಿದ್ಯಾವಂತರು, ಸಿಗರೇಟ್ ನಿಂದ ಆಗಬಹುದಾಗ ದುಷ್ಪರಿಣಾಮಗಳ ಬಗ್ಗೆ ಅರಿವು ಇರುವವರೇ  ಸಿಗರೇಟಿನ ಚಟಕ್ಕೆ ಬೀಳುತ್ತಿರುವುದು ಹೆಚ್ಚೆಚ್ಚು ಕಂಡು ಬರುತ್ತಿದೆ. ಮೊದಲಿಗೆ ಗೆಳೆಯರೊಂದಿಗೆ ಪಾರ್ಟಿನಲ್ಲಿ ಬೆರೆಯುವಾಗಲೋ ಅಥವಾ ತಮಾಷೆಗೆ, ಖುಷಿಗೆ ಹೀಗೆ ಒಂದೊಂದು ಕಾರಣಕ್ಕೆ ಆರಂಭವಾಗುವ ಈ ಚಟ ಕ್ರಮೇಣ ಅದನ್ನು ಬಿಟ್ಟು ಬದುಕಲಾಗದ ಮಟ್ಟಿಗೆ ತಂದು ನಿಲ್ಲಿಸಿ ಬಿಡುತ್ತದೆ.

ಇವತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಬೀಡಿ  ಸಿಗರೇಟಿನ ಬೆಲೆ ಗಗನಕ್ಕೇರಿದ್ದರೂ ಅದರ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಬದುಕುವವರು ಕಡಿಮೆಯೇ.  ಯುವಕರು ಸಿಗರೇಟ್  ಹಿಡಿದುಕೊಂಡು ಕುಳಿತುಕೊಳ್ಳುತ್ತಿರುವ ದೃಶ್ಯಗಳು ಟೀ ಅಂಗಡಿಗಳಲ್ಲಿ ಸಾಮಾನ್ಯವಾಗಿದೆ. ಕೆಲವರು ಸಿಗರೇಟ್ ಸೇದುವುದೇ ಘನತೆ ಎಂಬಂತೆ ನಡೆದುಕೊಳ್ಳುವುದು ಇಲ್ಲದಿಲ್ಲ.

ಕೆಲವರನ್ನು ಮಾತನಾಡಿಸಿದರೆ ಸಿಗರೇಟ್ ಸೇದುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟೆನ್ಷನ್ ದೂರವಾಗುತ್ತದೆ  ಎನ್ನುತ್ತಾರೆ. ಮತ್ತೆ ಕೆಲವರು ಖುಷಿಗೆ ಸೇದುತ್ತಿರುವುದಾಗಿ ಹೇಳುತ್ತಾರೆ. ತಮ್ಮ ಸಂಪಾದನೆಯಲ್ಲಿ ಕಾಲು ಭಾಗವನ್ನು ಸಿಗರೇಟಿಗೆ ಸುರಿಯುತ್ತಾರೆ. ಇನ್ನು ಧೂಮಪಾನ ಚಟವನ್ನು ಮೈಗೆ ಅಂಟಿಸಿಕೊಂಡ ವ್ಯಕ್ತಿ ಅದು ಇಲ್ಲದೆ ಹೋದರೆ ವಿಚಿತ್ರವಾಗಿ ವರ್ತಿಸುತ್ತಾನೆ. ಏನೋ ಕಳೆದುಕೊಂಡಂತೆ ಒದ್ದಾಡುತ್ತಾರೆ. ಜತೆಗೆ ಒಂದಕ್ಕೆ ದುಪ್ಪಟ್ಟು ಹಣವನ್ನು ನೀಡಿಯಾದರೂ ಸೇದಿಯೇ ಬಿಡುತ್ತಾನೆ.

ವಿದ್ಯಾರ್ಥಿಗಳು ಈ ಚಟಕ್ಕೆ ಹೆಚ್ಚಾಗಿ ಒಳಗಾಗುತ್ತಾರೆ. ಮುಂದುವರಿದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಸಿಗರೇಟ್  ಸೇದುವ ಚಟವನ್ನು ರೂಢಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಸಿಗರೇಟ್ ಹೊಗೆ ಶರೀರದೊಳಕ್ಕೆ ಹೋಗಿ ಅದು ಹೆಣ್ಣು ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಚಟ ಹತ್ತಿಸಿಕೊಂಡವರಿಗೆ ಅದನ್ನು ಸೇದಿದರೆ ಅದರಿಂದ ಏನೋ ಒಂದು ಮಜಾ ಸಿಗುತ್ತೆ ಎಂಬ ಭ್ರಮೆ ಬಂದು ಬಿಡುತ್ತದೆ. ಇದು ಏಕೆಂದರೆ ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತೆ ಮತ್ತೆ ಸೇದುವಂತೆ ಮಾಡಿ ಸಿಗರೇಟಿಗೆ ದಾಸರಾಗುವಂತೆ ಮಾಡಿಬಿಡುತ್ತದೆ.

ಈ ಸಿಗರೇಟ್ ಕ್ಯಾನ್ಸರ್ ನಂತಹ ಮಾರಕ ರೋಗವನ್ನಲ್ಲದೆ ಹತ್ತು ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತಿದೆ. ಹೀಗಾಗಿ  ಸಿಗರೇಟ್ ಸೇದುವವರು ಇನ್ನಾದರೂ ಇದರಿಂದ ದೂರ ಬರಲು ಪ್ರಯತ್ನಿಸಿ. ಇದರಿಂದ ಹಣ ಉಳಿತಾಯ ವಾಗುವುದರೊಂದಿಗೆ ನಿಮ್ಮ ಆಯಸ್ಸು ಕೂಡ ಹೆಚ್ಚಾಗಲಿದೆ ಎಂಬುದನ್ನು ಯಾವತ್ತಿಗೂ ಮರೆಯಬೇಡಿ…

Ad
Ad
Nk Channel Final 21 09 2023
Ad