Bengaluru 23°C
Ad

ಮೈಸೂರಿನಲ್ಲಿ ಗುರಾಯಿಸಿ ನೋಡಿದಕ್ಕೆ ಯುವಕನ ಕೊಲೆ: ಪ್ರಕರಣ ದಾಖಲು

ಕೊಲೆ ಮಾಡುವುದಕ್ಕೆ ಕಾರಣಗಳೇ ಬೇಕಾಗಿಲ್ಲ. ಇತ್ತೀಚೆಗಿನ ಮಾತೆತ್ತಿದ್ದರೆ ಕಾರಣವಲ್ಲದ ಕಾರಣಕ್ಕೆ ಕೊಲೆಗಳು ನಡೆಯುತ್ತಿರುವುದು ಹೆಚ್ಚಾಗಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ.

ಮೈಸೂರು: ಕೊಲೆ ಮಾಡುವುದಕ್ಕೆ ಕಾರಣಗಳೇ ಬೇಕಾಗಿಲ್ಲ. ಇತ್ತೀಚೆಗಿನ ಮಾತೆತ್ತಿದ್ದರೆ ಕಾರಣವಲ್ಲದ ಕಾರಣಕ್ಕೆ ಕೊಲೆಗಳು ನಡೆಯುತ್ತಿರುವುದು ಹೆಚ್ಚಾಗಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಅಪರಾಧ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ.

ಈ ನಡುವೆ ಯುವಕನೊಬ್ಬ ಗುರಾಯಿಸಿದ ಎಂಬ ಕಾರಣಕ್ಕೆ ಯುವಕರ ತಂಡ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಶಾಂತಿ ನಗರದ ಅರ್ಬಾಜ್ ಖಾನ್(18) ಎಂದು ಗುರುತಿಸಲಾಗಿದೆ.

ಈತ ಶಾಂತಿನಗರದ ಲಾಲ್ ಮಸೀದಿ ಬಳಿ ನಿಂತಿದ್ದು, ಇದೇ ವೇಳೆ ಶಾದಿಲ್, ಶಹಬಾಜ್, ಶೋಯಬ್ ಹಾಗೂ ಸಾಹಿಲ್ ಮೊದಲಾದವರು ಬಂದಿದ್ದು, ಅವರನ್ನು ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಜಗಳ ಆರಂಭವಾಗಿದ್ದು ಈ ವೇಳೆ ಆಕ್ರೋಶಗೊಂಡ ಯುವಕರು ಅರ್ಬಾಜ್ ಖಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅರ್ಬಾಜ್ ಖಾನ್ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ಯುವಕರ ತಂಡದಲ್ಲಿದ್ದ ಶಹಬಾಜ್ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಗರದಲ್ಲಿ ಮೇಲಿಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಕೊಲೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರು ಇತ್ತ ಗಮನಹರಿಸಿ ಪುಂಡಪೋಕರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Ad
Ad
Nk Channel Final 21 09 2023
Ad