ಪಾಕಿಸ್ತಾನ ಹಾಗೂ ಅಮೆರಿಕ ನಡುವೆ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಪಾಕಿಸ್ತಾನವನ್ನು ಸೋಲಿಸಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಗೆಲುವಿಗೆ 160 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಅಮೆರಿಕ ಕೂಡ 20 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.

ಹೀಗಾಗಿ ಪಂದ್ಯ ಸೂಪರ್​ ಓವರ್​ನತ್ತ ಸಾಗಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 1 ವಿಕೆಟ್ ಕಳೆದುಕೊಂಡು 13 ರನ್​ಗಳನಷ್ಟೇ ಕಲೆಹಾಕಲು ಶಕ್ತವಾಗಿ 5 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಲು ಬಂದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 5 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರು.

ಬಾಬರ್ 43 ರನ್​ಗಳ ಇನ್ನಿಂಗ್ಸ್ ಆಡಿದರೆ, ಶಾದಾಬ್ 40 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಾಹೀನ್ ಆಫ್ರಿದಿ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಪಾಕ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.

ಅಮೆರಿಕ ತಂಡ ಅಮೋಘ ಆರಂಭ ಪಡೆದುಕೊಂಡಿತು. ತಂಡ 5 ಓವರ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 36 ರನ್ ಕಲೆಹಾಕಿತು. ಆ ನಂತರ ಆರಂಭಿಕ ಸ್ಟೀವನ್ ಟೇಲರ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಒಂದಾದ ನಾಯಕ ಮೊನಾಂಕ್ ಪಟೇಲ್ ಮತ್ತು ಆಂಡ್ರೀಸ್ ಗೂಸ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

ಆಂಡ್ರೀಸ್ ಗೂಸ್ 35 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಇವರು ಔಟಾದ ಬೆನ್ನಲ್ಲೇ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ನಾಯಕ ಮೊನಾಂಕ್ ಪಟೇಲ್ ಕೂಡ ಔಟಾದರು.