News Karnataka Kannada
Monday, May 06 2024
ಮಂಗಳೂರು

40ಕ್ಕೆ ಓಟ ನಿಲ್ಲಿಸಿದ ಕನ್ನಡಿಗರ ಮನೆ ಮಗಳು “ಮಂಗಳ”

Mangala
Photo Credit : News Kannada

ಮಂಗಳೂರು: ಒಂದು ಕಾಲದ ಜನಪ್ರಿಯ ವಾರಪತ್ರಿಕೆ ಲಕ್ಷಾಂತರ ಪ್ರತಿ ಮುದ್ರಣವಾದ ದಿನವೇ ಮನೆಗೆ ಪ್ರವೇಶಿಸುತ್ತಿದ್ದ “ಮಂಗಳ” ತನ್ನ ಕೊನೇ ಪ್ರತಿ ಮುದ್ರಿಸಿದೆ. ಸುಮಾರು 25-30 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲೇ ಈ ಪ್ರತಿ ಲಕ್ಷಕ್ಕೂ ಅಧಿಕ ಮಾರಾಟವಾಗುತ್ತಿದ್ದುದು ಸಣ್ಣ ಮಾತೇನಲ್ಲ. ಇನ್ನು ಮಂಗಳೂರಿನಲ್ಲಿ ವಾರದಲ್ಲಿ ಸಾವಿರಾರೂ ಪ್ರತಿಗಳು ಮಾರಾಟವಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸರಣ ಇತ್ತು. ಮಧ್ಯಮ ವರ್ಗದ ಜನರ ಅಭಿರುಚಿಗೆ ಹೇಳಿ ಮಾಡಿಸಿದಂತೆ ಪತ್ರಿಕೆ ರೂಪುಗೊಳ್ಳುತ್ತಿತ್ತು. ಅನೇಕ ಬರಹಗಾರರಿಗೆ ಇದು ಮೊದಲ ಮೆಟ್ಟಿಲಾದ ಪತ್ರಿಕೆ ಎಂದರೆ ಅತಿಶಯೋಕ್ತಿ ಅಲ್ಲ.

ಆದರೆ  ಮುದ್ರಣ ಮಾಧ್ಯಮಗಳ ಓದುಗರು ಕ್ಷೀಣಿಸುತ್ತಿರುವ ಹೊತ್ತಿನಲ್ಲಿ  40 ವರ್ಷ ಪ್ರಕಟಣೆ ಹೊರಡಿಸಿದ್ದ “ಮಂಗಳ”ದ ಕನ್ನಡ ಆವೃತ್ತಿ ಮುದ್ರಣಕ್ಕೆ ಮಂಗಳ ಹಾಡಿದೆ. ಇದನ್ನು ಸಂಪಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣವಾದ ಫೇಸ್​​​ಬುಕ್​​ನಲ್ಲಿ ಪ್ರಕಟಿಸಿದ್ದಾರೆ.

“ಇದು ಅನಿವಾರ್ಯದ ನೋವು …ಈ ಕ್ಷಣದ ತಲ್ಲಣಗಳಿಗೆ ಒಡ್ಡಿಕೊಂಡೇ ಮುಂದಡಿ ಇಡಬೇಕಾದ ಪರಿಸ್ಥಿತಿ .ಮಂಗಳದ ಓದುಗರ ಪಾಲಿಗೆ ಇದು ಅನಿರೀಕ್ಷಿತವಿರಬಹುದಾದರೂ ನಮ್ಮ ಪಾಲಿಗೆ ನಿರೀಕ್ಷಿತವೇ .ಸತತ ಬಂದಪ್ಪಳಿಸಿದ ಕೊರೋನಾ ಮಹಾಮಾರಿ ಇಡೀ ಪತ್ರಿಕೋದ್ಯಮಕ್ಕೆ ಕೊಟ್ಟ ಹೊಡೆತ ಎಂಥಾದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವಂಥಾದ್ದೇ .ಹಾಗಿದ್ದೂ ನಾವು ಮತ್ತೆ ಮೂರು ವರ್ಷ ಸಾಹಸ ಮಾಡುತ್ತಲೇ ಬಂದೆವು .ಆದರೆ ಇದೀಗ ಮಂಗಳವನ್ನು ನಿಲ್ಲಿಸಲೇಬೇಕಾದ ಆರ್ಥಿಕ ತುರ್ತು ಎದುರಾಗಿದೆ .ಕೆಳಗೆ ನೀವು ನೋಡುತ್ತಿರುವುದು , ಕಳೆದ ನಲ್ವತ್ತು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ‘ಮಂಗಳ’ ವಾರಪತ್ರಿಕೆಯ ಕೊನೆಯ ಸಂಚಿಕೆಯನ್ನು !

ನಿರೀಕ್ಷಿತವೇ ಆದ್ದರಿಂದ ನಿರ್ಲಿಪ್ತತೆಯೂ ಜೊತೆಗಿರುತ್ತದೆಂದು ಎಷ್ಟೋ ಸಲ ಅಂದುಕೊಂಡದ್ದು ಇದೆಯಾದರೂ ಒಮ್ಮೊಮ್ಮೆ ಎದೆ ಭಾರವಾಗುವುದಿದೆ .ವಾಸ್ತವದಲ್ಲಿ , 2022 ರ ಸೆಪ್ಟೆಂಬರ್ 30 ಕ್ಕೇ ನನ್ನ ನಿವೃತ್ತಿಯಾಗಿತ್ತು .ನಮ್ಮಲ್ಲಿ 58 ರ ವಯಸ್ಸಿಗೆ ಆ ಘಟ್ಟ .ಹಾಗಿದ್ದೂ ಸಂಸ್ಥೆ ನನ್ನನ್ನು ಮುಂದುವರಿಸಿತು .ಈಗನಿಸುತ್ತಿದೆ ಅವತ್ತೇ ವಿದಾಯ ಹೇಳಿದ್ದಿದ್ದರೆ ಇವತ್ತಿನ ಎದೆಭಾರ ತಪ್ಪುತ್ತಿತ್ತು ಅಂತ ! ಎದೆಭಾರ ಯಾಕೆಂದರೆ , ಮಂಗಳವನ್ನು ಎದೆಯಲ್ಲಿಟ್ಟು ಪ್ರೀತಿಸುವ ಲಕ್ಷಾಂತರ ಮಂದಿ ಓದುಗರ ಮನೆ -ಮನಗಳಲ್ಲಿ ಒಂದು ಬಗೆಯ ಶೂನ್ಯತೆ ಆವರಿಸಲಿದೆ ಎಂಬ ಕಾರಣಕ್ಕೆ .ಕೋವಿಡ್ ಕಾಲದಲ್ಲಿ 3-3 ತಿಂಗಳು ಪತ್ರಿಕೆ ನಿಂತಾಗ ಓದುಗರು ವ್ಯಕ್ತಪಡಿಸಿದ ಪ್ರೀತಿ – ಕಾಳಜಿ -ನಿರಾಶೆ -ತಲ್ಲಣ -ಚಡಪಡಿಕೆಗಳೆಲ್ಲ ಇವತ್ತಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ .ಓದುಗರ ಬೆಲೆ ಕಟ್ಟಲಾಗದ ಆ ನಿರ್ಮಲ ಪ್ರೀತಿ ಮುಂದೆ ನಾನು ಮೂಕನಾಗಿದ್ದಿದೆ ! ಒಬ್ಬ ಸಂಪಾದಕನಿಗೆ ಇದಕ್ಕಿಂತ ಹೆಚ್ಚಿನ ಧನ್ಯತೆ ಬೇರೇನಿದೆ ?

ನಾನು ಉಪಸಂಪಾದಕನಾಗಿ ಮಂಗಳ ಸೇರಿದ್ದು 1986 ರಲ್ಲಿ .ಸುದೀರ್ಘ ಕಾಲದ ಪತ್ರಿಕಾ ಯಾನದಲ್ಲಿ ಹದಿನಾಲ್ಕು ವರ್ಷಗಳ ಕಾಲ ಅದರ ಚುಕ್ಕಾಣಿ ಹಿಡಿಯುವ ಮಹಾಭಾಗ್ಯ ಒಲಿದು ಬಂದದ್ದನ್ನು ಸುಕೃತವೆಂದು ಭಾವಿಸಿದ್ದೇನೆ .ಅಷ್ಟೇ ನಿಷ್ಠೆಯಿಂದ ಪತ್ರಿಕೆಗೆ ನನ್ನನ್ನು ಒಪ್ಪಿಸಿಕೊಂಡಿದ್ದೆ ಕೂಡಾ .ಪ್ರತಿಯೊಂದು ಸಂಚಿಕೆ ಕಟ್ಟುವಾಗಲೂ ನನ್ನ ಮುಂದೆ ಇರುತ್ತಿದ್ದುದು , ನಾಡಿನ ಯಾವುದೋ ಮೂಲೆಯಲ್ಲಿ ಕುಳಿತು ಪತ್ರಿಕೆ ಓದುವ ಅಪರಿಚಿತನ / ಳ ಮುಖ ಮಾತ್ರ . ಅವರ ಮುಖಗಳಲ್ಲಿ ಅರಳುತ್ತಿದ್ದ ಖುಷಿ ಮಾತ್ರ .ಕೊಟ್ಟ ಕಾಸಿಗೆ ಅನ್ಯಾಯವಾಗಿಲ್ಲ ಎಂದು ಖಾತರಿಪಡಿಸಿಕೊಳ್ಳುವ ಜರೂರತ್ತು -ಜವಾಬ್ದಾರಿ ನನ್ನ ಮೇಲಿತ್ತು !
ಇದು ಮಂಗಳದ ಸಂಸ್ಥಾಪಕರಾದ ದಿವಂಗತ ಎಂ ಸಿ ವರ್ಗೀಸ್ ಅವರನ್ನು ಸ್ಮರಿಸುವ ಸಂದರ್ಭ ಕೂಡಾ .ಅವರು ಹಾಕಿಕೊಟ್ಟ ತಳಪಾಯ ನನ್ನದು .ಎಂ ಸಿ ವರ್ಗೀಸ್ ಎಂಬ ಪತ್ರಿಕಾಭೀಷ್ಮ ಇಲ್ಲದಿರುತ್ತಿದ್ದರೆ ಬಹುಶಃ ನಾನೆಂಬ ಸಂಪಾದಕನೂ ಇರುತ್ತಿರಲಿಲ್ಲವೇನೋ .ತಂದೆ ನನ್ನಲ್ಲಿ ಏನನ್ನು ಕಂಡರೋ , ಮಕ್ಕಳು ಕೂಡಾ ಅದನ್ನೇ ಕಂಡರು .ಹಿರಿಯ ಮಗ ಸಾಬು ವರ್ಗೀಸ್ ಅವರು ನನ್ನನ್ನು ಸಂಪಾದಕನ ಪೀಠದಲ್ಲಿ ಕೂರಿಸಿ ಎಲ್ಲ ಸ್ವಾತಂತ್ರ್ಯ -ಸಹಕಾರಗಳನ್ನು ನೀಡಿದರು .ಅವರ ಆ ಪ್ರೀತಿ -ವಿಶ್ವಾಸಕ್ಕೆ ನಾನು ಚಿರಋಣಿ .ಇನ್ನಿಬ್ಬರು ಮಕ್ಕಳಾದ ಸಾಜನ್ ವರ್ಗೀಸ್ ಹಾಗೂ ಬಿಜು ವರ್ಗೀಸ್ ಅವರು ಕೂಡಾ ಅದೇ ಪ್ರೀತಿ – ವಿಶ್ವಾಸವನ್ನು ಇಟ್ಟವರು .

ಇನ್ನು ಸಹೋದ್ಯೋಗಿಗಳ ಕುರಿತು : ಪತ್ರಿಕೆ ಅಂದಾಗ ಅಲ್ಲೊಂದು ಸಂಪಾದಕ ಮಂಡಳಿ ಇರುತ್ತದೆಂಬುದು ಸಾಮಾನ್ಯ ನಂಬುಗೆ . ಆದರೆ ಕಳೆದ 10 ವರ್ಷಗಳಲ್ಲಿ ನಾನೊಬ್ಬನೇ ಸಂಪಾದಕ – ಸಂಪಾದಕ ಮಂಡಳಿ ಎಲ್ಲವೂ ಆಗಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿತ್ತು .ಸಹಾಯಕ್ಕೆ ಇದ್ದುದು ಕರಡು ತಿದ್ದುವ ಸುಧಾಕರ್ ಮಾತ್ರ .ವಾರದಲ್ಲಿ ನಾಲ್ಕು ದಿನ ಬಂದು ಆ ಕೆಲಸವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿ ನನ್ನ ಹೊರೆಯನ್ನು ಹಗುರವಾಗಿಸುತ್ತಿದ್ದರು .ಡಿಟಿಪಿ ವಿಭಾಗದ ಹೊಣೆ ಹೊತ್ತಿದ್ದ ಎಸ್ ರಾಜು ಬಗ್ಗೆ ವಿಶೇಷವಾಗಿ ಹೇಳಲೇಬೇಕು .ದಕ್ಷತೆಗೆ ಇನ್ನೊಂದು ಹೆಸರು ರಾಜು .ತುರ್ತು ಸಂದರ್ಭಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಬಂದು ಕೆಲಸಕ್ಕೆ ಕೂತಿದ್ದೂ ಇದೆ . ಕೆಲಸದ ಮೇಲಿನ , ಸಂಸ್ಥೆಯ ಮೇಲಿನ ಅವರ ನಿಷ್ಠೆ ಅಂಥಾದ್ದು ! ಕಚೇರಿ ಉಸ್ತುವಾರಿ ಸುರೇಶ್ ಕೆ ಚೆರಿಯಾನ್ ಸಜ್ಜನ ವ್ಯಕ್ತಿ .ತಾಳ್ಮೆಯ ಸಾಕಾರ ಮೂರ್ತಿ .ಹೊಂದಿಕೊಳ್ಳುವ ಅವರ ಗುಣ ನನಗೆ ತುಂಬಾ ಇಷ್ಟ .ಪ್ರಸರಣ ವಿಭಾಗದ ಸುನಿಲ್ ಕುಮಾರ್ ಟಿ ಕೆ ಅವರ ಪಾತ್ರ ಮಂಗಳದ ಬೆಳವಣಿಗೆಯಲ್ಲಿ ಮಹತ್ವದ್ದು .ಇವರೆಲ್ಲರ ಸಹಕಾರದಿಂದಲೇ ಮಂಗಳ ಈ ಮಟ್ಟಿಗೆ ಬೆಳೆದು ನಿಂತದ್ದು !

ಹಿರಿಯರಾದ ಬಾಬು ಕೃಷ್ಣಮೂರ್ತಿ ಅವರು ಭದ್ರ ಬುನಾದಿ ಹಾಕಿ 17 ವರ್ಷಗಳ ಕಾಲ ಎಳೆದ ಮಂಗಳದ ತೇರನ್ನು , ಓದಿನ ಅಭಾವ ಕಾಡುವ ಈ ದಿನಗಳಲ್ಲೂ 14 ವರ್ಷಗಳ ಕಾಲ ಮುನ್ನಡೆಸಲು ಸಾಧ್ಯವಾಗಿದ್ದು ನನ್ನಲ್ಲಿ ಕೃತಕೃತ್ಯ ಭಾವ ಮೂಡಿಸಿದೆ ಎಂಬುದನ್ನು ಮತ್ತೊಮ್ಮೆ ಒಪ್ಪಿಸುತ್ತಲೇ , ತೀವ್ರ ಒತ್ತಡದ ಕೆಲಸದ ನಡುವೆಯೂ ಆರೋಗ್ಯದಲ್ಲಿ ವ್ಯತ್ಯಯವಾಗದಂತೆ ಕಾಪಿಟ್ಟ ಭಗವಂತನಿಗೆ ಪೊಡಮಡುತ್ತಲೂ , ಪ್ರತಿ ಸಂಚಿಕೆಯನ್ನು ಜೀವಂತಿಕೆಯಿಂದ ಕಟ್ಟಿಕೊಡಲು ನೆರವಾದ ನಾಡಿನ ಹಿರಿ- ಕಿರಿಯ ಲೇಖಕರಿಗೆಲ್ಲ , ವಿಶೇಷವಾಗಿ ಅವಿರತವಾಗಿ ಬರೆದ ಕಾದಂಬರಿಕಾರರಿಗೆಲ್ಲ ನನ್ನ ತುಂಬು ಮನದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಸ್ವೀಕೃತ ಕಾದಂಬರಿಗಳು , ಕಥೆಗಳು , ಕವನಗಳು , ಲೇಖನಗಳು ಕಡತದಲ್ಲಿ ಸಾಕಷ್ಟಿವೆ .ಅವುಗಳ ಲೇಖಕರಿಗೆ ಆಗುವ ನೋವು-ನಿರಾಶೆಯನ್ನು ಅವರ ಪಕ್ವತೆ ಮೆಟ್ಟಿನಿಲ್ಲಬಹುದೇನೋ. ಆದರೆ ಯಾವ ರೀತಿಯಲ್ಲೂ ಸಮಾಧಾನ ಹೇಳಲಾಗದಂತಹ ಚಿತ್ರವೊಂದು ಮೊನ್ನೆ ಮೇಲ್ ಮೇಲೆ ಕಣ್ಣಾಡಿಸುತ್ತಿದ್ದಾಗ ಎದುರಾಯಿತು .’ನಮ್ಮ ಮನೆ ಬೆಳಕು’ ವಿಭಾಗಕ್ಕೆ ಬಂದ ಒಂದಷ್ಟು ಮುಗ್ಧ ಪುಟಾಣಿಗಳ ಭಾವಚಿತ್ರಗಳು ನನ್ನತ್ತ ನೋಡಿ , ‘ಅಂಕಲ್ , ನಮ್ಮ ಫೋಟೋ ಯಾವಾಗ ಬರುತ್ತೆ ? ‘ ಎಂದು ಕೇಳಿದಂತಾಗಿ ಕ್ಷಣ ಭಾವುಕನಾದೆ. ‘ಸಾರಿ ಕಂದಮ್ಮಗಳಾ…’ ಎನ್ನುತ್ತಾ ಮೇಲ್ ಮುಚ್ಚಿದೆ  ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಬದಲಾದ ಕಾಲಘಟ್ಟದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮಂಗಳ ವಾರಪತ್ರಿಕೆ ಈ ವಾರ ಕೊನೆಯ ಸಂಚಿಕೆ ಪ್ರಕಟಿಸಿ ಭಾವುಕವಾಗಿದೆ. ಸರಿಸುಮಾರು ನಾಲ್ಕು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪತ್ರಿಕೆ ತನ್ನ ಯಾನ ನಿಲ್ಲಿಸಿರುವುದರಿಂದಾಗಿ ಅನೇಕ ಓದುಗರ ನಿರಾಸೆಗೊಂಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು