News Karnataka Kannada
Friday, May 17 2024
ಸಂಪಾದಕೀಯ

ದೇಶದದ್ಯಾಂತ ಪ್ರಜ್ವಲಿಸಿದ ಪ್ರಜ್ವಲ್‌ ಪೆನ್‍ಡ್ರೈವ್; ಈತ ಅದೆಂಥಾ ವಿಕೃತ ಕಾಮಿಯಾಗಿರಬೇಡ

Prajwal (1)
Photo Credit : NewsKarnataka

ಹಾಸನದ ಸಂಸದರೂ ಆಗಿರೋ  ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್. ಈತನ ಕಾಮಕಾಂಡದ ಅಂತ ಹೇಳಲಾಗಿರುವ ರಾಶಿ ರಾಶಿ ವಿಡಿಯೋಗಳಿರುವ ಪೆನ್‌ಡ್ರೈವ್ ಸೃಷ್ಟಿಸಿರೋ ಹಲ್‌ಚಲ್ ಅಷ್ಟಿಷ್ಟಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ವ್ಯಕ್ತವಾಗುತ್ತಿರುವ ಜನರ ಆಕ್ರೋಶ ನೋಡ್ತಿದ್ರೆ ಗೊತ್ತಾಗುತ್ತೆ. ಈ ಲೈಂಗಿಕ ದೌರ್ಜನ್ಯ ಪ್ರಕರಣ ಜನರನ್ನ ಯಾವ ಮಟ್ಟಿಗೆ ರೊಚ್ಚಿಗೆಬ್ಬಿಸಿದೆ ಅಂತ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಕುರಿತು ಸುದ್ದಿ ಪ್ರಸಾರ ಆಗುತ್ತಿದೆ. ಮತ್ತೊಂದು ಕಡೆ ಈ ಬಗ್ಗೆ ತೀವ್ರ ಆಕ್ರೋಶ ಕೂಡ ಮೊಳಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಜನ ಛೀ ಛೀ ಅಂತಿದ್ದಾರೆ.

ಈ ಪ್ರಕರಣವನ್ನು ಸಾರ್ವಜನಿಕಗೊಳಿಸಿದ ಸಂದರ್ಭ, ಇದರ ಹಿಂದೆ ಮುಂದೆ ಇರುವ ರಾಜಕೀಯ ಲೆಕ್ಕಾಚಾರಗಳು, ಈಗ ನಡೆಯುತ್ತಿರುವ ಪ್ರತಿಭಟನೆಗಳು, ಎಲ್ಲವೂ ಕುತೂಹಲಕರವಾಗಿವೆ.

ಮಾಜಿ ಪ್ರಧಾನಿ ದೇವೇ ಗೌಡರು ಕಟ್ಟಿಡ ಜೆಡಿಎಸ್‌ ಸಾಮ್ರಜ್ಯಕ್ಕೆ ಕಳಂಕ ತಂದ ಮೊಮ್ಮಗ ಎಂದರೆ ತಪ್ಪಾಗಲಾರದು. ದೊಡ್ಡ ದೊಡ್ಡ ರಾಜಕಾರಣಿಗಳೇ ತುಂಬಿದ್ದ ಕುಟುಂಬದಿಂದ ಬಂದು, ಶಿಕ್ಷಿತನಾಗಿದ್ದೂ, ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಒಬ್ಬ ವ್ಯಕ್ತಿ ಹೀಗೆಲ್ಲ ಮಾಡಬಲ್ಲನೆಂದರೆ ಇದೊಂದು ಪರ್ಸನಾಲಿಟಿ ಡಿಸಾರ್ಡರ್ ಕೂಡಾ ಇರಬಹುದು.

ಆರೋಪಿ ಸ್ಥಾನದಲ್ಲಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ, ಈಗಾಗಲೇ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದಾರೆ. ಇನ್ನು ತನಿಖೆಗೆ ಕರೆದಾಗ ಪ್ರಜ್ವಲ್‌ ಬರುತ್ತಾರೆ ಎಂದು ಅವರ ತಂದೆ ಎಚ್‌ಡಿ ರೇವಣ್ಣ ಹೇಳಿದ್ದಾರೆ. ಆದರೆ ಬಹುಶಃ ನಿರೀಕ್ಷಣಾ ಜಾಮೀನು ದೊರೆಯುವವರೆಗೂ ಪ್ರಜ್ವಲ್‌ ಮರಳುವುದು ಅನುಮಾನ. ಇತ್ತ “ತನಿಖೆ ನಡೆಯಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಚಾರ ನೋಡುವುದಾದರೇ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಒಂದೆರಡಲ್ಲ, 2800ಕ್ಕೂ ಹೆಚ್ಚು ಇವೆ ಎಂದರೆ ಈತ ಅದೆಂಥಾ ವಿಕೃತಕಾಮಿಯಾಗಿರಬೇಡ ಎಂದು ಯೋಚನೆ ಬಹುವುದು ಸಹಜವೇ ಸರಿ. . . 16ರಿಂದ 50 ವರ್ಷ ವಯಸ್ಸಿನ 500ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದರೆ ಇದೇನು ಕೇವಲ ದೌರ್ಜನ್ಯವಲ್ಲ, ಇದೊಂದು ಮನೋವಿಕೃತಿಯೇ ಸರಿ. ಎರಡು ಪೆನ್‌ ಡ್ರೈವ್‌ಗಳಲ್ಲಿ ಸುಮಾರು 40 ಜಿಬಿಯಷ್ಟು 2900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಲಾಗ್ತಿದೆ.

ಇನ್ನು ವಿಡಿಯೋಗಳಲ್ಲಿ ಸರ್ಕಾರಿ ಅಧಿಕಾರಿಗಳು, ಮಾಡೆಲ್‌ಗಳು ಮಾತ್ರವಲ್ಲದೆ, ಮನೆಗೆಲಸದ ವಯಸ್ಸಾದ ಹೆಂಗಸರೂ ಇದ್ದಾರೆ. ಅಷ್ಟೇ ಅಲ್ಲ, ತನ್ನ ಅಶ್ಲೀಲವಾದ ಹಾಗೂ ಅನೈತಿಕ ವರ್ತನೆಯ ವಿಡಿಯೋವನ್ನು ಆತ ಸ್ವತಃ ತಾನೇ ಮಾಡಿಕೊಂಡಿದ್ದಾನೆ. ಈತ ಉಮೇಶ್ ರೆಡ್ಡಿಗಿಂತ ಹತ್ತು ಪಟ್ಟು ವಿಕೃತಕಾಮಿ ಎಂಬ ಮಾತು ಕೂಡ ಬಂದಾಯ್ತು.

ಇದೆಲ್ಲವೂ ಒಂದು ಕಡೆಗಾದರೆ ಪ್ರಕರಣದ ಇನ್ನೊಂದು ಆಯಾಮವನ್ನೂ ನೋಡಬೇಕು. ಲೈಂಗಿಕ ಕಿರುಕುಳದ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಎಲ್ಲರಿಗೂ ಸಿಗುವಂತೆ ಹಂಚಿದವರು ಯಾರು? ಯಾಕೆ ಅದನ್ನು ಚುನಾವಣೆಯ ಸಂದರ್ಭದಲ್ಲಿಯೇ ಹೊರಬಿಡಲಾಯಿತು? ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ಮೈತ್ರಿ ಮಾಡಿಕೊಂಡಿರುವ ಸಮಯವನ್ನೇ ಆಯ್ದುಕೊಂಡು ಈ ವಿಡಿಯೋಗಳನ್ನು ಹರಿದಾಡುವಂತೆ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರ ಸೋಲಿಗಾಗಿ ನಡೆಸಿದ ಸಂಚು ಕೂಡ ಇಲ್ಲವೇ? ಇದು ಸಮಯಸಾಧಕತನವಲ್ಲ, ಇದರ ಹಿಂದೆ ರಾಜಕೀಯ ಇಲ್ಲ ಇದೆ ಎನ್ನಬಹುದಾ?. ಇತ್ತ ಹರಿಬಿಟ್ಟ ವಿಡಿಯೋಗಳಲ್ಲಿರುವ ಸಂತ್ರಸ್ತ ಅಮಾಯಕ ಮಹಿಳೆಯರ ಗುರುತನ್ನು ಸಾರ್ವಜನಿಕಗೊಳಿಸಿದವರೂ ಕೂಡಾ ಆರೋಪಿ ಪಟ್ಟಿಗೆ ಸೇರಬಹುದು.

ವಿಡಿಯೋ ಮೂಲಕ ಕಾರ್ತಿಕ್‌ ಹೇಳಿದ್ದೇನು..?
ಇನ್ನು ಈ ವಿಡಿಯೋವನ್ನು ಹರಿಬಿಟ್ಟವರು ಯಾರು ಎಂಬ ಅನುಮಾನ ಪ್ರಶ್ನೆಗಖಿಗೆ ಉತ್ತರ ಸ್ಪಷ್ಠವಾಗಿ ಸಿಕಿಲ್ಲ. ಆದರೆ ಎರಡು ದಿನಗಳ ಹಿಂದೆ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದ ಕಾರ್ತಿಕ್​ ಎಂಬಾತ, ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೇನೆ.
ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು. ಹಿಂಸೆ ಕೊಟ್ಟರು ಹಲ್ಲೆ ಮಾಡಿದರು ಆದ್ದರಿಂದ ಅವರ ಮನೆಯಿಂದ ಹೊರಬಂದೆ ಎಂದಿದ್ದರು. ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ಧ ಪ್ರಜ್ವಲ್ ರೇವಣ್ಣ ಸ್ಟೇ ತರುತ್ತಾರೆ. ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್, ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದ್ದರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ ಎಂದಿದ್ದರು.

ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗಂತೂ ನಾನು ವಿಡಿಯೋ ಕೊಟ್ಟಿಲ್ಲ. ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದೇ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದ್ದಾರೆ ಎಂದು ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿ ಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲಾ ವಿವರವಾಗಿ ಹೇಳುತ್ತೇನೆ ಎಂದು ವಿಡಿಯೋ ಮೂಲಕ ಕಾರ್ತಿಕ್‌ ಹೇಳಿದ್ದರು.

ಆದರೆ  ತಾನು ಬಿಡುಗಡೆ ಮಾಡುವುದಿದ್ದರೆ ವಿಧಾನಸಭೆ ಚುನಾವಣೆ ವೇಳೆಯೇ ಬಿಡುಗಡೆ ಮಾಡುತ್ತಿದ್ದೆ. ಈ ಬಗ್ಗೆ ಸಿಬಿಐ ತನಿಖೆಯಿಂದ ಮಾತ್ರ ನ್ಯಾಯಸಿಗಲು ಸಾಧ್ಯ ಎಂದು ವಕೀಲ ದೇವರಾಜೇಗೌಡ ಟಾಂಗ್‌ ನೀಡಿದ್ದಾರೆ. ಇಬ್ಬರು ಅಲ್ಲಎಂದ ಮೇಲೆ ಅಶ್ಲೀಲ ದೃಶ್ಯಾವಳಿಗಳ ಪೆನ್‌ಡ್ರೈವ್‌ ಸಾರ್ವಜನಿಕರಿಗೆ ಸಿಕ್ಕಿದ್ದಾದರೂ ಹೇಗೆ? ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ಮುಂದುವರೆದು. . . . ಮಾಧ್ಯಮವೊಂದರ ಸಂದರ್ಶನದಲ್ಲಿ ಸಂತ್ರಸ್ತ ಮಹಿಳೆಯರು ಪ್ರಜ್ವಲ್‌ ರೇವಣ್ಣ ಮಾಡುತ್ತಿದ್ದ ಅನಾಚಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸಂತ್ರಸ್ಥ ಮಹಿಳೆಯರನ್ನು ಭವಾನಿ ರೇವಣ್ಣ ಅವರೇ ಕರೆದುಕೊಂಡು ಬಂದು ಕೆಲಸಕ್ಕೆ ಬಳಸಿಕೊಂಡಿದ್ದರಂತೆ. ಆದರೆ ಇಲ್ಲಿ ಅಪ್ಪ-ಮಗ ಮನೆಯ ಕೆಲಸದವರ ಮೇಲೆ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯ ಅಷ್ಟಿಷ್ಟಲ್ಲ. ಇದನ್ನು ಯಾರ ಬಳಿಯೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಇದು ಇಂದು ನಿನ್ನೆಯದಲ್ಲ. ಸರಿಸುಮಾರು ಐದಾರು ವರುಷಗಳಿಂದ ನಡೆಯುತ್ತಿದೆ. ಇಲ್ಲಿ ಕೆಲಸ ಕೇಳಿ ಕೊಂಡು ಬಂದರೆ ಯುವತಿಯರೇ ಆಗಲಿ ಹೆಂಗಸರೇ ಆಗಲಿ ಅಪ್ಪ ಮಗನಿಗೆ ಸಹಕರಿಸಲೇ ಬೇಕು. ಒಂದು ಸಾರಿ ಇವರ ಮನೆ ಹೊಸ್ತಿಲು ತುಳಿದರೆ ಬೆಡ್‌ ರೂಂ ಗೆ ನೇರಾ ಹೋಗಲೇ ಬೇಕು. ಇದೇ ನಾವು ಕಣ್ಣಾರೆ ಕಂಡಿರುವುದು. ಅನುಭವಿಸಿರುವುದು ಎಂದು ಈಗಾಗಲೇ ಆ ಮನೆಯಲ್ಲಿ ಕೆಲಸ ಮಾಡಿ ಲೈಂಗಿಕ ಕಿರುಕುಳ ಅನುಭವಿಸಿರುವ ಸಂತ್ರಸ್ಥರು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

ಎಸ್‌ಐಟಿ ತನಿಖೆಗೆ ಕಾಲಾವಕಾಶ ಕೋರಿದ ಪ್ರಜ್ವಲ್‌ ರೇವಣ್ಣ:
ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ನೀಡುವಂತೆ ಕೋರಿ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ಪರವಾಗಿ ವಕೀಲ ಅರುಣ್‌ ಜಿ. ಅವರು ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಉತ್ತರ ನೀಡಿರುವ ವಕೀಲ ಅರುಣ್‌, ʻನನ್ನ ಕಕ್ಷಿದಾರ ಪ್ರಜ್ವಲ್‌ ರೇವಣ್ಣ ಅವರು ಸದ್ಯ ಪ್ರವಾಸದಲ್ಲಿದ್ದಾರೆ. 7 ದಿನ ಕಾಲಾವಕಾಶ ನೀಡಿ, ನಂತರ ಮತ್ತೊಂದು ದಿನಾಂಕ ನೀಡಿ. ಅಂದು ಅವರು ವಿಚಾರಣೆಗೆ ಹಾಜರಾಗುತ್ತಾರೆ. ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪ್ರಜ್ವಲ್‌ ರೇವಣ್ಣ, ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಬರೆದು ಕಾಲವಕಾಶ ಕೋರಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಪ್ರಜ್ವಲ್‌ ರೇವಣ್ಣ ಅವರ ಪರವಾಗಿ ವಕೀಲ ಜಿ ಅರುಣ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನೂರಾರು ವಿಡಿಯೋಗಳ ಬಗ್ಗೆ ತಾನು ಮಾತಾಡಲಾರೆ, ಸಾಮಾಜಿಕ ಪ್ರಜ್ಞೆ ಬಗ್ಗೆ ಮಾತಾಡಿದರೆ ಅದು ಚರ್ಚೆಯೆನಿಸಿಕೊಳ್ಳುತ್ತದೆ, ತನ್ನದೇನಿದ್ದರೂ ನ್ಯಾಯಾಲಯದ ವ್ಯಾಪ್ತಿ ಮಾತ್ರ ಎಂದು ಅರುಣ್ ಹೇಳಿದರು. ತನ್ನ ಕಕ್ಷಿದಾರನ ಬಗ್ಗೆ ಒಂದು ಮಾತನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ, ಅವರು ವಿದೇಶಕ್ಕೆ ಹೊರಡುವಾಗ ಯಾವುದೇ ಎಫ್ ಐಅರ್ ದಾಖಲಾಗಿರಲಿಲ್ಲ ಮತ್ತು ಎಸ್ ಐಟಿಯನ್ನೂ ರಚಿಸಲಾಗಿರಲಿಲ್ಲ

ಒಂದು ವರ್ಷದ ಹಿಂದೆಯೇ ವಿಡಿಯೋಗಳಲ್ಲಿ ಮಾರ್ಫಿಂಗ್ ಅಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಲಯದ ಮೊರೆಹೊಕ್ಕಿದ್ದರು, ಆಗ ಅವರು ಮುಂದೆ ಜರುಗಬಹುದಾದ ಕೆಟ್ಟ ಘಟನೆಗಳ ಬಗ್ಗೆ ಹೊಂದಿದ್ದ ಆತಂಕ ಈಗ ನಿಜವಾಗಿದೆ ಎಂದು ವಕೀಲ ಹೇಳಿದರು. ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿ ಬಿಟ್ಟಿದ್ದು ಯಾರು, ಅದರ ಮೂಲ ಯಾವುದು ಮೊದಲಾದ ಸಂಗತಿಗಳ ತನಿಖೆ ಎಸ್ ಐಟಿ ವ್ಯಾಪ್ತಿಯಲ್ಲಿ ಬರುತ್ತದೆ ಅಂತ ತಾನು ಭಾವಿಸುವುದಾಗಿ ಅರುಣ್ ಹೇಳಿದ್ದಾರೆ.

ಪೆನ್‍ಡ್ರೈವ್ ಕೇಸ್ ಹಿಂದೆ ಡಿ.ಕೆ.ಶಿ ಕೈವಾಡ:
ಪೆನ್‍ಡ್ರೈವ್ ಕೇಸ್ ಹಿಂದೆ ಮಹಾನಾಯಕ(ಡಿ.ಕೆ) ಇದ್ದಾರೆ. ಆ ಮಹಾ ನಾಯಕನನ್ನು ಭೇಟಿ ಮಾಡಿದ್ಯಾರು? ಈ ಪ್ರಕರಣದ ವಿರುದ್ಧ ಕಾಂಗ್ರೆಸ್ ಮಹಾನಾಯಕರು ಪ್ರತಿಭಟನೆ ಮಾಡಿಸಿದ್ರು, ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ನಾವು ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಮಾತನ್ನು ಚಿಕ್ಕಪ್ಪನಾಗಿ ಹೇಳುತ್ತಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ಇದು ನಾಚಿಕೆಗೇಡಿನ ವಿಷಯ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ:
ಪ್ರಸ್ತುತ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್ 354A, 354D, 506, 509 ಅಡಿ ಕೇಸ್‌ ದಾಖಲಾಗಿದ್ದು, ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್‌ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಶ್ರೀಮಂತರು, ಪ್ರಭಾವಿಗಳು ಹಾಗೂ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ? ಇದು ಕಾನೂನು ಹಾಗೂ ನ್ಯಾಯಾಂಗದ ಪಾರದರ್ಶಕತೆ, ತನಿಖಾ ಸಂಸ್ಥೆಗಳ ಪ್ರಾಮಾಣಿಕತೆ ಹಾಗೂ ಸಾಕ್ಷಿಗಳನ್ನು ಕಲೆಹಾಕುವ ಪರಿಶ್ರಮ ಇವುಗಳನ್ನೆಲ್ಲ ಅವಲಂಬಿಸಿದೆ.

ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ಅಧಿಕೃತವಾಗಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್‌ ಅಧಿಕಾರಿಗಳು ಇದ್ದಾರೆ. ಎಡಿಜಿಪಿ ಬಿ.ಕೆ. ಸಿಂಗ್ ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್‌ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕ ಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೋರಿದೆ.

ಪ್ರಜ್ವಲ್‌ ರೇವಣ್ಣ ಲೈಂಗಿಕ ಕಿರುಕುಳ ಬರೀ ಮಹಿಳೆಯರಿಗಷ್ಟೇ ಅಲ್ಲ. ಅಪ್ರಾಪ್ತ ಮಕ್ಕಳ ಮೇಲೂ ದೌರ್ಜನ್ಯ ನಡೆಸಿರುವ ಅನುಮಾನವಿದೆ. ಹಾಗಾಗಿನೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗನೂ ಎಂಟ್ರಿ ಕೊಟ್ಟಿದೆ. SITಗೂ ಮನವಿ ಕಳಿಸಿದೆ. ಅಪ್ರಾಪ್ತ ಮಕ್ಕಳು ಸಂತ್ರಸ್ತರಾಗಿದ್ದರೆ ತಕ್ಷಣ ನಮಗೆ ಮಾಹಿತಿ ನೀಡಿ. ತನಿಖಾ ವರದಿ ನೀಡಿ ಅಂತ SITಗೆ ಮಕ್ಕಳ ಆಯೋಗ ಪತ್ರ ಬರೆದಿದೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ಪರ ಬಿ.ಎನ್‌ ಜಗದೀಶ್‌‌ ವಾದ ಮಂಡಿಸಲಿದ್ದಾರೆ. ಅಶ್ಲೀಲ ವೀಡಿಯೋ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚಳ ಆಗ್ತಿದೆ. ಸಂತ್ರಸ್ತ ಮಹಿಳೆಯರು ಆರ್ಥಿಕವಾಗಿ ಅಶಕ್ತರಾಗಿದ್ದರೆ ಅವರಿಗೆ ನೆರವಾಗುವುದು. ಜೊತೆಗೆ ಸರ್ಕಾರದ ಪರ ವಕಾಲತ್ತು ಹಾಕೋಕೆ ವಿಶೇಷ ಅಭಿಯೋಜಕರನ್ನಾಗಿ ಬಿ.ಎನ್‌.ಜಗದೀಶ್‌‌ ಅವರನ್ನ ನೇಮಕ ಮಾಡಿದೆ ಸರ್ಕಾರ.

ಆದರೆ ಇದು ಇಂದು ನಾಳೆಗೆ ಸುಧಾರಿಸುವ ವಿಚಾರವಲ್ಲ.  ಇನ್ನು ಈ ಪ್ರಕರಣಕ್ಕೆ ನ್ಯಾಯಾಸಿಗಲು ಎಷ್ಟು ವರ್ಷ ಬೇಕೋ ದೇವರೇ ಬಲ್ಲ. .  ಹೇಳಿ ಕೇಳಿ ದೊಡ್ಡ ಕುಟುಂಬದ ವಿಚಾರ ಬೇರೆ. . .

ಏನೇ ಇರಲಿ ಚುನಾವಣೆ ಸಂದರ್ಭದಲ್ಲಿ ಈ ವಿಚಾರ ಸದ್ಯ ರಾಜ್ಯ ರಾಜಕೀಯಕ್ಕೆ ನುಂಗಲಾದರ ತುತ್ತಾಗಿದೆ. ಹೀಗಾಗಿ ಸತ್ಯಾಸತ್ಯಾತೆ ಹೊರ ಬರಲೇ ಬೇಕಿದೆ. ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ, ಬಿಕೆ ಸಿಂಗ್‌ ನೇತೃತ್ವದ ಎಸ್‌ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಆದಷ್ಟು ಬೇಗ ಸಂತ್ರಸ್ತರಿಗೆ ನ್ಯಾಯಾ ಒದಗಿಸಬಹುದು. ಹಾಗೆಯೇ ಮುಂದೇ ಇಂತಹ ತಪ್ಪಿತಸ್ಥರಿಗೆ ಮುಟ್ಟಿ ನೋಡಿಕೊಳ್ಳುವಂತಹ ಶಿಕ್ಷೆಯಾಗಬೇಕು ಎಂಬುದು ಹಾರೈಕೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
46114
Ashitha s

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು