Bengaluru 23°C
Ad

ಮುಂಗಾರು ಆರ್ಭಟ: ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ರಸ್ತೆ ಮುಳುಗಡೆ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗಂಟೆಗೂ ಅಧಿಕ ಕಾಲ ಸುರಿದ ಜೋರು ಮಳೆಗೆ ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು, ರಸ್ತೆಗಳು ಮುಳುಗಡೆಯಾಗುವ ಜೊತೆಗೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ದೊಡ್ಡ ಕೆರೆಗಳತ್ತ ನೀರು ಬೋರ್ಗರೆದು ಹರಿಯುತ್ತಿದೆ.

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗಂಟೆಗೂ ಅಧಿಕ ಕಾಲ ಸುರಿದ ಜೋರು ಮಳೆಗೆ ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು, ರಸ್ತೆಗಳು ಮುಳುಗಡೆಯಾಗುವ ಜೊತೆಗೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ದೊಡ್ಡ ಕೆರೆಗಳತ್ತ ನೀರು ಬೋರ್ಗರೆದು ಹರಿಯುತ್ತಿದೆ.

Ad
300x250 2

ತಾಲೂಕಿನ ಹಂಗಳ, ತೆರಕಣಾಂಬಿ, ಕಸಬಾ ಹಾಗೂ ಬೇಗೂರು ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದ್ದು, ಜಮೀನುಗಳಲ್ಲಿ ಕೆರೆಗಳಂತೆ ನೀರು ಸಂಗ್ರಹವಾಗಿತ್ತು. ಇದರಿಂದ ಈರುಳ್ಳಿ, ಅರಿಶಿಣ, ಸೂರ್ಯಕಾಂತಿ, ಅಲಸಂದೆ ಇತರೆ ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.

ತಾಲೂಕಿನ ಅಣ್ಣೂರುಕೇರಿ, ಕೋಡಹಳ್ಳಿ, ಶಿವಪುರ, ಬೊಮ್ಮಲಾಪುರ, ಮಳವಳ್ಳಿ, ಕೂತನೂರು, ಪಡುಗೂರು, ಹಾಲಹಳ್ಳಿ, ತೊಂಡವಾಡಿ ರಸ್ತೆ ಮಳುಗಡೆಯಾದ ಪರಿಣಾಮ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಇನ್ನೂ ಮಳೆ ನೀರು ಹಲವು ಗ್ರಾಮಗಳ ಜಮೀನುಗಳಲ್ಲಿ ಹೊಳೆಯಂತೆ ಮತ್ತು ಹಳ್ಳಗಳಲ್ಲೂ ರಭಸದಿಂದ ಉಕ್ಕಿ ಹರಿಯಿತು. ಕಸಕಡ್ಡಿ, ಮರದ ದಿಮ್ಮಿಗಳು, ಭೂತಾಳೆ ಕಟ್ಟೆಗಳು, ತೆಂಗಿನ ಮಟ್ಟೆಗಳನ್ನು ಹೊತ್ತು ರಭಸದಿಂದ ಸಾಗಿತು. ಹಲವು ಕಡೆಗಳಲ್ಲಿ ಜಮೀನುಗಳಿಗೆ ಹೋಗಲೆಂದು ರೈತರು ಮಾಡಿಕೊಂಡಿರುವ ಕಿರುಸೇತುವೆಗಳು ಕಿತ್ತುಕೊಂಡು ಹೋಗಿವೆ. ಗೋಕಟ್ಟೆ ಮತ್ತು ಚಿಕ್ಕೆಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ಮಳೆ ನೀರು ದೊಡ್ಡ ಕೆರೆಗಳನ್ನು ಸೇರಿತು.

ಬರಗಿ, ವಡೆಯನಪುರ ಇತರೆ ದೊಡ್ಡಕೆರೆಗಳು ಕೋಡಿ ಬಿದ್ದಿವೆ. ಮಳೆಯಿಂದ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಳೆ ನೀರು ನದಿಯಂತೆ ಹರಿಯಿತು. ಇದೇ ಪ್ರದೇಶದ ಬಳಿ ಸೇತುವೆ ತುಂಬಿ ಹರಿದ ಪರಿಣಾಮ ಬೊಮ್ಮಲಾಪುರ ಮುಖ್ಯ ರಸ್ತೆ ಸಂಪರ್ಕ ಕಡಿತವಾಯಿತು. ವಡೆಯನಪುರ ಗ್ರಾಮದ ಬಳಿಯೂ ಕೊಡಸೋಗೆ ರಸ್ತೆ ಸಂಪರ್ಕ ಕಡಿತವಾಯಿತು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣ, ಮಡಹಳ್ಳಿ ಸರ್ಕಲ್ ಎಂದಿನಂತೆ ಕೆರೆಯಂತಾಗಿದ್ದವು. ತಾಲೂಕಿನ ವಡ್ಡಗೆರೆಗೆ ಕೆರೆ ಏತ ನೀರಾವರಿ ಯೋಜನೆಯಡಿ ತುಂಬಿ ಕೋಡಿ ಬಿದ್ದಿದೆ. ಮುಂದಿನ ಕೆರೆಗಳಿಗೆ ನೀರು ಹರಿಸುತ್ತಿದ್ದು, ಇದರೊಂದಿಗೆ ಮಳೆ ನೀರು ಸೇರಿಕೊಳ್ಳುವ ಕಾರಣ ತಾಲೂಕಿನಲ್ಲಿ ಬಹುತೇಕ ಕೆರೆಗಳು ಮಳೆಯ ಕಾರಣದಿಂದ ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಳೆಯಿಂದ ನೀರಾವರಿ ಮತ್ತು ಖುಷ್ಕಿ ಬೆಳೆಗಳಿಗೆ ಹಾನಿಯಾಗಿದೆ.

Ad
Ad
Nk Channel Final 21 09 2023
Ad