ಉಡುಪಿ: ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಅಮೃತಮಹೋತ್ಸವ ಸಮಾರಂಭವು ಇದೇ ಜ. 8ರಂದು ಬಾರ್ಕೂರು ನ್ಯಾಶನಲ್ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಬಿ.ರಾಜರಾಮ್ ಶೆಟ್ಟಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಬಾರ್ಕೂರು ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಶೆಟ್ಟಿ, ಡಿಡಿಪಿಯು ಮಾರುತಿ, ಡಿಡಿಪಿಐ ಶಿವರಾಜ ಕೆ.ಎನ್., ಉದ್ಯಮಿ ಬಾರ್ಕೂರು ಸುಧಾಕರ ಶೆಟ್ಟಿ, ಎಚ್. ವಿಶ್ವನಾಥ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬೆಳಿಗ್ಗೆ 11.30ಕ್ಕೆ ಹೊಸ ಶಿಕ್ಷಣ ನೀತಿ- 2020 ಕುರಿತು ಅವಲೋಕನ ನಡೆಯಲಿದೆ. ಸಂಜೆ 5ಗಂಟೆಗೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ. ಆ ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಬಿ. ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ಶೇಡಿಕೊಡ್ಲು ಎಚ್. ವಿಠಲ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ಎನ್. ಮಂಜುನಾಥ್ ಭಟ್ ಉಪಸ್ಥಿತರಿದ್ದರು.