News Karnataka Kannada
Monday, May 06 2024
ಮಂಗಳೂರು

ಜೆಡಿಎಸ್ ಪಕ್ಷವನ್ನು ಮತ್ತೆ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ : ಎಚ್.ಡಿ. ದೇವೇಗೌಡ

Ex PM HDD to carryout a roadshow between Bengaluru and Mysuru on March 26
Photo Credit :

ಮಂಗಳೂರು: ದೇಶದ ಇಂದಿನ ರಾಜಕೀಯ ಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ದೇಶ ಆಳುವುದು ಕಷ್ಟ ಇದೆ. ಉತ್ತರ ಪ್ರದೇಶ ಸಹಿತ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಬಂದ ಬಳಿಕ ರಾಜಕೀಯ ಬೆಳವಣಿಗೆ ಉಂಟಾಗಲಿದೆ. ಅದು ಏನು ಎಂಬುದನ್ನು ಕಾದುನೋಡಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಅವರು, ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜೆಡಿಎಸ್ ಪಕ್ಷವನ್ನು ಮತ್ತೆ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ನಡೆಸುತ್ತೇನೆ. ಪ್ರತಿ ತಿಂಗಳೂ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ನನ್ನ ಅನುಭವದ ಆಧಾರದಲ್ಲಿ ಮುಂದಿನ ಒಂದು ವರ್ಷದಲ್ಲಿ ಪಕ್ಷವನ್ನು ಕಟ್ಟುವ ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಕುಮಾರಸ್ವಾಮಿ ಅವರು ಈಗಾಗಲೇ ಪಂಚರತ್ನ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಮಂಗಳೂರಿನಿಂದ ಪಕ್ಷ ಸಂಘಟನೆ ಆರಂಭಿಸಿ ರಾಜ್ಯಾದ್ಯಂತ ವಿಸ್ತರಿಸುತ್ತೇವೆ ಎಂದರು.

ದೇಶದಲ್ಲಿ ಜಾತ್ಯಾತೀತ ಪಕ್ಷಗಳನ್ನು ಒಂದುಗೂಡಿಸಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಬಾರಿ ಪ್ರಯತ್ನ ನಡೆಸಿದ್ದೆ. ಆದರೆ, ಆ ಪ್ರಯತ್ನ ಸಫಲವಾಗಲಿಲ್ಲ. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹೇಳಿದ ಪರಿಣಾಮ ನಾವು ಹಾಸನ ವಿಧಾನಸಭಾ ಕ್ಷೇತ್ರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿ ಜೆಡಿಎಸ್‌ಗೆ ೩೦ಕ್ಕೂ ಅಧಿಕ ಸ್ಥಾನ ನಷ್ಟವಾಯಿತು. ಅದರ ಪರಿಣಾಮವನ್ನು ಕಾಂಗ್ರೆಸ್ ಈಗ ಅನುಭವಿಸುತ್ತಿದೆ. ರಾಜ್ಯದಲ್ಲಿ ಮುಂದಿನ ಅವಧಿಗೆ ಸಮ್ಮಿಶ್ರ ಸರಕಾರ ರಚನೆಗೊಳ್ಳುವ ಸಾಧ್ಯತೆಯಿದೆ. ಆ ಸಂದರ್ಭ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ನಮ್ಮ ಬಳಿ ಬರಬಹುದು. ಆ ವೇಳೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜಾತ್ಯಾತೀತ ಪಕ್ಷಕ್ಕೆ ನಮ್ಮ ಒಲವು ಎಂದು ಅವರು ಹೇಳಿದರು.
ಹಿಜಾಬ್ ವಿವಾದ ಹೇಗೆ, ಎಲ್ಲಿಂದ, ಯಾಕೆ ಹುಟ್ಟಿಕೊಂಡಿತು,ಇದಕ್ಕೆ ಮೂಲ ಕಾರಣ ಯಾರು ಎಂಬ ಬಗ್ಗೆ ಗೊತ್ತಿದೆ. ಇದರ ಹಿಂದೆ ಕಾಂಗ್ರೆಸ್, ಬಿಜೆಪಿ ಹಾಗೂ ಮತ್ತೊಂದು ಸಣ್ಣ ರಾಜಕೀಯ ಪಕ್ಷ ಇದೆ. ಕರಾವಳಿಯಿಂದ ಚಿಕ್ಕಮಗಳೂರುವರೆಗೆ ಸಮಸ್ಯೆಗಳನ್ನು ಉದ್ಭವಿಸುವ ಕೆಲ ಶಕ್ತಿಗಳಿವೆ. ನಾನು ಎಂದೂ ಧರ್ಮದ ಆಧಾರದಲ್ಲಿ ವೈಷಮ್ಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿಲ್ಲ. ಪ್ರಸ್ತುತ ಸಮಾಜದಲ್ಲಿ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ. ಕರಾವಳಿಯಲ್ಲಿ ಇಂತಹ ಪ್ರಯತ್ನ ನಡೆಯುತ್ತಿರುವುದು ದುರಂತ ಎಂದು ದೇವೇಗೌಡ ಹೇಳಿದರು.

ಜಾತ್ಯಾತೀತ ಪಕ್ಷಗಳು ಒಂದಾಗದಿರುವುದು ನಮ್ಮ ಹಿನ್ನಡೆಗೆ ಕಾರಣ. ಬಿಜೆಪಿಯಲ್ಲಿ ನರೇಂದ್ರ ಮೋದಿ ಒಬ್ಬರೇ ಎಲ್ಲ ಕಡೆ ತೆರಳುತ್ತಿದ್ದಾರೆ. ಮೋದಿ ಹೊರತುಪಡಿಸಿ ಬಿಜೆಪಿಗೆ ಶಕ್ತಿ ತುಂಬುವ ಬೇರೆ ವ್ಯಕ್ತಿ ಬಿಜೆಪಿಯಲ್ಲಿಲ್ಲ. ಮೋದಿ ಅವರಿಗೆ ವಿಲ್ ಪವರ್ ಇದೆ. ಉತ್ತರಪ್ರದೇಶ ಸಹಿತ ಪಂಚರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮೋದಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ನಾನು ಮೋದಿ ಅವರನ್ನು ಭೇಟಿ ಮಾಡಲು ತೆರಳಿದಾಗ ನನ್ನನ್ನು ಕೈಹಿಡಿದು ಕರೆದುಕೊಂಡು ಹೋದರು. ಚುನಾವಣೆ ಸಂದರ್ಭ ನಮ್ಮಿಬ್ಬರ ನಡುವಿನ ಪಂಥವನ್ನು ಮರೆತು ನೀವು ಹಿರಿಯರು ನಮಗೆ ಸಲಹೆ ನೀಡಬೇಕು ಎಂದು ನನ್ನ ಎಲ್ಲ ಮಾತು ಆಲಿಸಿದರು ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ರಾಮನಗರ ಜಿಲ್ಲೆ ಬಿಟ್ಟು ಕುಮಾರಸ್ವಾಮಿ ಅವರು ಬೇರೆಲ್ಲೂ ಹೋಗುವುದಿಲ್ಲ. ಸಿಎಂ ಇಬ್ರಾಹಿಂ ಅವರು ನನ್ನ ಜತೆಯೇ ಇದ್ದವರು. ಈಗ ಕಾಂಗ್ರೆಸ್ ಬಿಡುತ್ತೇನೆ ಎಂದು ಹೇಳಿರುವುದನ್ನು ಗಮನಿಸಿದ್ದೇನೆ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಇಬ್ರಾಹಿಂ ನಮ್ಮ ಪಕ್ಷಕ್ಕೆ ಬರುವುದಾದರೆ ನಿರಾಕರಣೆ ಮಾಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ದೇವೇಗೌಡರು ಪ್ರತಿಕ್ರಿಯಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಜೆಡಿಎಸ್ ಮುಖಂಡ ಎಂಬಿ ಸದಾಶಿವ, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಮಹಮ್ಮದ್ ಕುಂಞ್ಞಿ, ಅಕ್ಷಿತ್ ಸುವರ್ಣ, ಸುಶಿಲ್ ನೊರೊನ್ಹಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು