Bengaluru 24°C
Ad

ಅಕ್ಕ ಅನ್ನಪೂರ್ಣತಾಯಿ: ಬಸವ ತತ್ವಕ್ಕೆ ಮಠಾಧೀಶೆಯಾದ ಶಿಕ್ಷಕಿ

ಅಕ್ಕ ಅನ್ನಪೂರ್ಣತಾಯಿ ನಗರದ ಚಿದಂಬರಾಶ್ರಮದಲ್ಲಿ ಶಿಕ್ಷಕಿ ಆಗಿದ್ದರು. ಮಠಕ್ಕೆ ಬಹಳ ಸನ್ಯಾಸಿಗಳು ಬರುತ್ತಿದ್ದರು. ಅದನ್ನು ಕಂಡು ಅವರಲ್ಲಿ ಆಧ್ಯಾತ್ಮದ ಒಲವು ಬೆಳೆಯಿತು.

ಬೀದರ್‌: ಅಕ್ಕ ಅನ್ನಪೂರ್ಣತಾಯಿ ನಗರದ ಚಿದಂಬರಾಶ್ರಮದಲ್ಲಿ ಶಿಕ್ಷಕಿ ಆಗಿದ್ದರು. ಮಠಕ್ಕೆ ಬಹಳ ಸನ್ಯಾಸಿಗಳು ಬರುತ್ತಿದ್ದರು. ಅದನ್ನು ಕಂಡು ಅವರಲ್ಲಿ ಆಧ್ಯಾತ್ಮದ ಒಲವು ಬೆಳೆಯಿತು.

ಲಿಂ.ಲಿಂಗಾನಂದ ಸ್ವಾಮೀಜಿ ಹಾಗೂ ಲಿಂ.ಮಾತೆ ಮಹಾದೇವಿ ಅವರ ಪ್ರವಚನದಿಂದ ಪ್ರೇರಣೆಗೊಂಡು ಬಸವ ತತ್ವಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು. ನಂತರ ಅವರು ಬಸವ ತತ್ವಕ್ಕೆ ಮಠಾಧೀಶೆ ಆದರು.

ಹಾರೂರಗೇರಿಯ ಬಂಡೆಪ್ಪ ಹಾಗೂ ಸೂಗಮ್ಮ ದಂಪತಿಯ ಮಗಳಾಗಿ 1963ರ ಜೂನ್ 1 ರಂದು ಜನಿಸಿದ ಅಕ್ಕ  ಅನ್ನಪೂರ್ಣತಾಯಿ ಓದಿದ್ದು ಕನ್ನಡ ಎಂ.ಎ, ಬಿ.ಇಡಿ. ಹಾಗೂ ಕಾನೂನು ಪದವಿ. ಇಷ್ಟಲಿಂಗ ದೀಕ್ಷೆ ಪಡೆದದ್ದು ಭಾಲ್ಕಿಯ ಚನ್ನಬಸವ ಪಟ್ಟದ್ದೇವರಿಂದ.

ಅವರು ನಾಲ್ಕು ದಶಕಗಳ ಕಾಲ ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ನೆರೆ ರಾಜ್ಯ, ಅಮೆರಿಕ, ಆಸ್ಟ್ರೆಲಿಯಾ,  ಯುರೋಪ್ ದೇಶಗಳಲ್ಲೂ ಬಸವ ತತ್ವ ಪ್ರವಚನ ಮಾಡಿದ್ದರು. ಕಲ್ಯಾಣ ಕರ್ನಾಟಕದ ಖ್ಯಾತ ಪ್ರವಚನಕಾರರೆಂದೇ ಗುರುತಿಸಿಕೊಂಡಿದ್ದರು. ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದರು.

ಬಸವಗಿರಿಯಲ್ಲಿ ಪ್ರತಿ ವರ್ಷ ಬಸವ ಭಾರತಿ ಸಂಸ್ಕಾರ ಶಿಬಿರ ನಡೆಸಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಮಾಡಿದ್ದರು. ಪ್ರತಿ ವರ್ಷ ವಚನ ವಿಜಯೋತ್ಸವ ಸಂಘಟಿಸಿ, ದೇಶದ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸಿ ಬಸವ ತತ್ವದ ಪ್ರಚಾರ ಕೈಗೊಂಡರು. ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡಿದ ರಾಷ್ಟ್ರಮಟ್ಟದ ಸಾಧಕರಿಗೆ ಗುರುಬಸವ ಪುರಸ್ಕಾರ ಪ್ರದಾನ ಮಾಡಿದರು. ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ವಚನ ಪಾರಾಯಣ ಆರಂಭಿಸಿದರು. ಬಸವ ತತ್ವದ ಬೇರುಗಳನ್ನು ಗಟ್ಟಿಗೊಳಿಸಿದರು.

ವಚನ ಸಾಹಿತ್ಯಕ್ಕೆ ಸರ್ವೋಚ್ಚ ಸ್ಥಾನ ಕಲ್ಪಿಸಿದ ಅಕ್ಕ: ಅಕ್ಕ ಅನ್ನಪೂರ್ಣತಾಯಿ ಅವರು ವಚನ ಸಾಹಿತ್ಯಕ್ಕೆ ಪಟ್ಟಗಟ್ಟುವ ಮೂಲಕ ವಚನಗಳಿಗೆ ಸರ್ವೋಚ್ಚ ಸ್ಥಾನ ಕಲ್ಪಿಸಿದ್ದರು.  ಬಸವಗಿರಿಯಲ್ಲಿ ಅವರು ನಡೆಸುತ್ತಿದ್ದ ವಾರ್ಷಿಕ ವಚನ  ವಿಜಯೋತ್ಸವದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಜನ ಪಾಲ್ಗೊಳ್ಳುತ್ತಿದ್ದರು.

ಅವರ ಶರಣ ಸಂಗಮ, ಬಸವ ಜ್ಯೋತಿ ಮೊದಲಾದ ಕಾರ್ಯಕ್ರಮಗಳು ಜನರ ಮನ ಸೆಳೆದಿದ್ದವು.  ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾ ಮಠ, ನೀಲಮ್ಮ ಬಳಗ, ಲಿಂಗಾಯತ ಸೇವಾ ದಳ, ಬಸವ ಸಂಪದ ಪ್ರಕಾಶನ, ಶಿವಯೋಗ ಸಾಧಕರ ಕೂಟ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿ ಬಸವ ತತ್ವ ಪ್ರಚಾರ ಮಾಡಿದ್ದರು.

ಬಸವ ಸಂಪದ ಪ್ರಕಾಶನ ಮೂಲಕ ನೂರಾರು ಕೃತಿಗಳನ್ನು ಪ್ರಕಟಿಸಿದ್ದರು. 40ಕ್ಕೂ ಅಧಿಕ ವಚನ ಸಾಹಿತ್ಯದ ಕೃತಿಗಳನ್ನು ಬರೆದು ಶರಣ ಸಾಹಿತಿ ಎನಿಸಿಕೊಂಡಿದ್ದರು ಎಂದು ಪ್ರಭುದೇವ ಸ್ವಾಮೀಜಿ ಸ್ಮರಿಸಿದರು.

Ad
Ad
Nk Channel Final 21 09 2023
Ad