ಚೆನ್ನೈ: ಲೈಂಗಿಕ ಕಿರುಕುಳ ಆರೋಪದಲ್ಲಿ ಈ ಹಿಂದೆ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಡಿಜಿಪಿ ರಾಜೇಶ್ ದಾಸ್ ಅವರನ್ನು ವಿಚ್ಛೇದಿತ ಪತ್ನಿಯ ಮನೆಯಲ್ಲಿ ಅಕ್ರಮ ಪ್ರವೇಶ ಆರೋಪದಡಿಯಲ್ಲಿ ಇಂದು ಬೆಳಗ್ಗೆ ತಾಂಬರಂ ನಗರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ರಾಜೇಶ್ ದಾಸ್ ಅವರ ವಿಚ್ಛೇದಿತ ಪತ್ನಿ, ತಮಿಳುನಾಡಿನ ಇಂಧನ ಕಾರ್ಯದರ್ಶಿ ಬೀಲಾ ವೆಂಕಟೇಶನ್ ಅವರು ನೀಡಿದ ದೂರಿನ ಆಧಾರದ ಮೇಲೆ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬೀಲಾ ಅವರು ಈ ವಾರದ ಆರಂಭದಲ್ಲಿ ನೀಡಿದ ದೂರಿನಲ್ಲಿ ದಾಸ್ ಮತ್ತು ಇತರ ಕೆಲವು ಮಂದಿ ತೈಯೂರಿನಲ್ಲಿರುವ ತನ್ನ ಒಡೆತನದ ಮನೆಗೆ ಅತಿಕ್ರಮವಾಗಿ ನುಗ್ಗಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಕೆಲಂಬಾಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದಾಸ್ ಅವರು ತಾವು ಆ ಮನೆಯ ಕಾಯಂ ನಿವಾಸಿ ಎಂದು ಹೇಳಿಕೊಂಡಿದ್ದರು. ಇಂಧನ ಕಾರ್ಯದರ್ಶಿಯಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಬೀಲಾ ಅವರನ್ನು ದೂಷಿಸಿದ್ದರು.
ಈ ಸಂಬಂಧ ಅವರು ಗುರುವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ಬೀಲಾ ಅವರಿಗೆ ಕೋರ್ಟ್ ಸೂಚನೆ ನೀಡಿತ್ತು. ಕಿರಿಯ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ದಾಸ್ ಅವರಿಗೆ ಈ ಹಿಂದೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.