News Karnataka Kannada
Sunday, April 28 2024
ವಿಶೇಷ

ಹೆಣ್ಣನ್ನು ಗರ್ಭದಲ್ಲೇ ಕೊಲ್ಲುವಂತಹ ಸಮಾಜದಲ್ಲಿ ಲೈಂಗಿಕ ದೌರ್ಜನ್ಯ ಒಂದು ಸಾಮಾನ್ಯ ಸಂಗತಿಯೇ!

Is sexual harassment a common phenomenon in a society where a woman is killed in the womb...
Photo Credit : Freepik

ನಮ್ಮ ಸಾಮಾಜಿಕ ಜೀವನದಲ್ಲಿ, ಕೌಟುಂಬಿಕ ವ್ಯವಸ್ಥೆಯಲ್ಲಿ, ಹೆಣ್ಣು-ಗಂಡು ಸಂಬಂಧಗಳಲ್ಲಿ ತೀವ್ರತರ ಬದಲಾವಣೆಗಳಿಗೆ ಕಾರಣವಾದ ಈ ಕಾಲಘಟ್ಟವು ಅನೇಕ ಏರುಪೇರುಗಳನ್ನು ಎದುರುಗೊಳ್ಳುತ್ತಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿದೆ. ವಿವಾಹ ವಿಚಾರದಲ್ಲಿ ತಕ್ಕಮಟ್ಟಿಗೆ ಆಯ್ಕೆಯ ಸ್ವಾತಂತ್ರ್ಯ ದೊರೆತಿದೆ. ಇದೇ ವೇಳೆ, ಕೆಲವೊಂದು ನಿರ್ದಿಷ್ಟ ಸಮುದಾಯಗಳಲ್ಲಿ ಮತ್ತು ವೃತ್ತಿ ಕಾರಣಕ್ಕೆ ಮದುವೆಗೆ ಹುಡುಗಿ ಸಿಗದಿರುವಂತಹ ಸ್ಥಿತಿಯೂ ಇದೆ.

ಮೇಲ್ನೋಟಕ್ಕೆ ನಾವೆಲ್ಲರೂ ಆಧುನಿಕರಂತೆ ಕಾಣಿಸುತ್ತೇವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಅಗಾಧ ಬದಲಾವಣೆಗಳಿಗೆ ತೆರೆದುಕೊಂಡಿದ್ದೇವೆ. ಆದರೆ, ಈ ಎಲ್ಲ ಆಧುನಿಕತೆಯು ಹೆಚ್ಚಿನ ಜನರ ಮಟ್ಟಿಗೆ ತೋರುಗಾಣಿಕೆಯದು ಎಂಬುದು ಅನೇಕ ಸಂದರ್ಭಗಳಲ್ಲಿ ಎದ್ದು ಕಾಣಿಸುತ್ತದೆ. ವೇಷಭೂಷಣ, ಮಾತಿನ ಒನಪು, ತಾಂತ್ರಿಕ ಸಾಧನಗಳ ಬಳಕೆಗೆ ಮಾತ್ರ ಸೀಮಿತವೇನೋ ಎಂಬ ಅನುಮಾನ ಮೂಡಿಸುತ್ತದೆ. ನಮ್ಮ ಚಿಂತನೆಯಲ್ಲಿ, ದೈನಂದಿನ ಬದುಕಿನ ನಡೆಯ ಭಾಗವಾಗಿ ಅದು ಇನ್ನೂ ನಮ್ಮಲ್ಲಿ ಒಡಮೂಡಿಲ್ಲ ಎಂಬುದು ಬೇರೆ ಬೇರೆ ರೂಪದಲ್ಲಿ ನಮ್ಮ ಅರಿವಿಗೆ ಬರುತ್ತಲೇ ಇರುತ್ತದೆ.

ಹೆಣ್ಣಿಗೆ ಸಂಬಂಧಿಸಿದ ಹಿಂಸೆಯ ಅನೇಕ ಮುಖಗಳು ಇದಕ್ಕೊಂದು ಬಲವಾದ ನಿದರ್ಶನವಾಗಿ ಸಿಗುತ್ತವೆ. ತಂತ್ರಜ್ಞಾನವು ಸಬಲೀಕರಣದ ಸಾಧನವಾಗುವ ಬದಲು ಹತ್ಯೆಯ ಹತಾರ ಆಗಿಯೂ ಬಳಕೆಯಾಗಿರುವುದನ್ನು ಹೆಣ್ಣು ಭ್ರೂಣಹತ್ಯೆಯು ನಮ್ಮ ಮುಂದೆ ತೆರೆದಿಡುತ್ತದೆ. ಲಿಂಗಾನುಪಾತದಲ್ಲಿನ ಕುಸಿತವು ಮುಂದೊಂದು ದಿನ ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಹೆಣ್ಣು ಎಂಬ ಕಾರಣಕ್ಕೇ ಅದನ್ನು ಗರ್ಭದಲ್ಲೇ ಕೊಲ್ಲುವಂತಹ ಮನಸ್ಥಿತಿಯುಳ್ಳ ಯಾವುದೇ ಸಮಾಜದಲ್ಲಿ ಅತ್ಯಾಚಾರ ಕೂಡ ಒಂದು ಸಾಮಾನ್ಯ ಸಂಗತಿ ಎಂಬಂತಾಗಿಬಿಡುವ ಅಪಾಯ ಇಲ್ಲದಿಲ್ಲ.

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಕುರಿತು ಜನಸಾಮಾನ್ಯರಲ್ಲಿ ಅರಿವು ಹೆಚ್ಚಿಸುವ ಸಲುವಾಗಿ ಬೇರೆ ಬೇರೆ ನೆಲೆಗಳಲ್ಲಿ ಅನೇಕ ಉಪಕ್ರಮಗಳು, ಆಚರಣೆಗಳು ಜಾರಿಯಲ್ಲಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಗ್ರಾಫ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಏರಿಕೆ ನೋಡಿದರೆ ಇಂತಹ ಉಪಕ್ರಮಗಳು, ಆಚರಣೆಗಳು ನಮ್ಮ ಸಮಾಜದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬ ಬೇಸರ ಮೂಡುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪ್ರತೀ ತಾಸಿಗೆ 49 ಪ್ರಕರಣಗಳು ನಾಖಲಾಗುತ್ತಿವೆ. 2021ರಲ್ಲಿ ದೇಶದಾದ್ಯಂತ ಒಟ್ಟು 4.28 ಲಕ್ಷ ಪ್ರಕರಣಗಳು ದಾಖಲಾಗಿವೆ. 2020ಕ್ಕೆ ಹೋಲಿಸಿದರೆ ಹೀಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 15.3ರಷ್ಟು ಹೆಚ್ಚಳ ಆಗಿದೆ ಎಂದು ವರದಿಯಾಗಿದೆ. ಇದು ಕಳವಳ ಮೂಡಿಸುವಂತಹ ಸಂಗತಿ, ಕರ್ನಾಟಕ ಕೂಡ ಇದಕ್ಕೆ ಹೊರತಲ್ಲ. 2020ರಲ್ಲಿ ಕರ್ನಾಟಕದಲ್ಲಿ ಒಟ್ಟು 12,680 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಈ ಸಂಖ್ಯೆ 14,468ಕ್ಕೆ ಏರಿದೆ. ಇವು ದಾಖಲಾಗಿರುವ ಪ್ರಕರಣಗಳು, ದಾಖಲಾಗದೆ, ನೋವು ಯಾರಿಗೂ ಕಾಣದಂತೆ ಕಣ್ಣೀರಾಗಿ ಕರಗಿಹೋದ ಪ್ರಕರಣಗಳ ಸಂಖ್ಯೆ ಇನ್ನೆಷ್ಟೋ?

ದೈಹಿಕ ಹಿಂಸೆಯ ಬಗ್ಗೆ ಮಹಿಳೆಯರು ಧ್ವನಿ ಎತ್ತುವುದು ತುಂಬಾ ತಡವಾಗಿ ಸಹಿಸಲು ಇನ್ನು ಸಾಧ್ಯವೇ ಇಲ್ಲ. ಎನ್ನುವ ಹಂತದಲ್ಲಿ ಮಾತ್ರ, ಉದ್ಯೋಗ, ಶಿಕ್ಷಣದ ಬಲ ಬೆಂಬಲಕ್ಕೆ ಇದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಮೌನದ ಮೊರೆ ಹೋಗುತ್ತಾರೆ. ಸಾಮಾಜಿಕ ಸಂದರ್ಭಗಳು, ಪೋಷಕರು, ಮಕ್ಕಳ ಭವಿಷ್ಯದ ಪ್ರಶ್ನೆ… ಹೀಗೆ ಏನೇನೋ ಕಾರಣಗಳು, ಯಾವುದೋ ಸಂಬಂಧ, ಮತ್ತೆ ಎಂತಹುದೋ ಅಳುಕು ಗಂಟಲು ಕಟ್ಟುವಂತೆ ಮಾಡುತ್ತದೆ. ಒಂದೊಮ್ಮೆ ಹೇಳಿದರೂ, ನೋವುಂಡ ಮಹಿಳೆಗೆ ಹೆಚ್ಚಿನ ಸಂದರ್ಭಗಳಲ್ಲಿ ಸಿಗುವುದು ಹೊಂದಿಕೊಂಡು ಹೋಗಬೇಕೆಂಬ ಸಲಹೆ-ಸಾಂತ್ವನವೇ, ವಿಪರ್ಯಾಸದ ಸಂಗತಿಯೆಂದರೆ, ಮಹಿಳೆಯರ ಮೇಲೆ ನಡೆಯುವ ಎಷ್ಟೋ ದೌರ್ಜನ್ಯಗಳು ನಮ್ಮಲ್ಲಿ ದೌರ್ಜನ್ಯಗಳೆಂದೇ ಪರಿಗಣಿತವಾಗುವುದಿಲ್ಲ. ಅದರಲ್ಲೂ ಕುಟುಂಬದ ಚೌಕಟ್ಟಿನೊಳಗೆ ನಡೆಯುವ ದೌರ್ಜನ್ಯವು ಮಹಿಳೆ ಸಹಿಸಿಕೊಳ್ಳಬೇಕಾದ ಸಣ್ಣ ನೋವು’ ಎಂಬಂತೆ ಬಿಂಬಿತವಾಗಿದೆ ಮತ್ತು ಒಪ್ಪಿತ ಮೌಲ್ಯವಾಗಿ ಈಗಲೂ ಚಲಾವಣೆಯಲ್ಲಿ ಇದೆ, ಕಾನೂನಿನ ಕೊಂಡಿಗಳನ್ನು ಎಷ್ಟೇ ಬಿಗಿಗೊಳಿಸಿದರೂ ಅದರ ಪ್ರಯೋಜನ ಸಿಗದೇ ಇರುವುದಕ್ಕೆ ಇಂತಹ ನಾನಾ ಅಂಶಗಳು ಕಾರಣವಾಗಿವೆ.

ಮಹಿಳೆಯರ ಮೇಲಿನ ದೌರ್ಜನ್ಯವು ದೈಹಿಕ ಹಿಂಸೆಗೆ ಮಾತ್ರ ಅನ್ವಯಿಸುವುದಿಲ್ಲ. ಇದು ಲೈಂಗಿಕ ಭಾವನಾತ್ಮಕ, ಮಾನಸಿಕ… ಹೀಗೆ ಬೇರೆ ಬೇರೆ ಆಯಾಮಗಳನ್ನು ಒಳಗೊಂಡಿದೆ. ಬಹುಮುಖಿ ನೆಲೆಯಲ್ಲಿ ನಿರಂತರವಾಗಿ ಪ್ರಯತ್ನಿಸಿದರೆ ಮಾತ್ರ ಇದನ್ನು ನಿಗ್ರಹಿಸಲು ಸಾಧ್ಯ. ಅದಕ್ಕೆ ಪೂರಕವಾಗಿ ನಮ್ಮ ಸಾಮಾಜಿಕ ನಿಲುವುಗಳು ಬದಲಾಗಬೇಕು. ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಮೇಲಾಗಿ ಸಬಲತೆಯ ಹಂಬಲವು ಮಹಿಳೆಯ ಒಳಗಿನಿಂದಲೇ ಬರುವಂಥ ವಾತಾವರಣವನ್ನು ಸೃಷ್ಟಿಸಿಕೊಡಬೇಕಾದುದು ಇವತ್ತಿನ ಅಗತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು