ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಬಿಲ್ಕಿಸ್ ಬಾನೋ ಪ್ರಕರಣ ಮತ್ತು ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಶುಕ್ರವಾರ ಬಿಜೆಪಿಯನ್ನು ಟೀಕಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯ ‘ಬೇಟಿ ಬಚಾವೋ’ ಘೋಷಣೆ ಈಗ ‘ಬೇಟಿ ಜಲಾವೋ’ ಆಗಿ ಬದಲಾಗಿದೆ ಎಂದು ಹೇಳಿದ್ದಾರೆ.
ನೀವು (ಬಿಜೆಪಿ) ‘ಬೇಟಿ ಬಚಾವೋ’ ಘೋಷಣೆಯನ್ನು ನೀಡಿದ್ದೀರಿ, ಈಗ ನಿಮ್ಮ ಘೋಷಣೆ ಎಲ್ಲಿದೆ? ಮಣಿಪುರದ ಜನರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ (ಬ್ರಿಜ್ ಭೂಷಣ್ ಸಿಂಗ್)ಗೂ ಜಾಮೀನು ಮಂಜೂರಾಗಿದೆ. ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ನಿಮ್ಮನ್ನು ದೇಶದ ರಾಜಕೀಯದಿಂದ ಹೊರಹಾಕಲಿದ್ದಾರೆ.
ಬಿಜೆಪಿಯ ‘ಬೇಟಿ ಬಚಾವೋ’ ಈಗ ‘ಬೇಟಿ ಜಲಾವೋ’ ಆಗಿ ಬದಲಾಗಿದೆ. ತೃಣಮೂಲ ಕಾಂಗ್ರೆಸ್ಗೆ ಯಾವುದೇ ಕುರ್ಚಿ ಬೇಕಾಗಿಲ್ಲ, ಆದರೆ ಈ ಬಿಜೆಪಿ ಆಡಳಿತ ಹೋಗಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ ಮಮತಾ. ನಾವು ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿ I.N.D.I.A. ಬ್ಯಾನರ್ ಅಡಿಯಲ್ಲಿ ಎಲ್ಲಾ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ ಎಂದು ಬಂಗಾಳ ಮುಖ್ಯಮಂತ್ರಿ ಸಭೆಗೆ ತಿಳಿಸಿದರು.