ಖಾರ್ಗೋನ್: ಮದ್ಯಪಾನ ಮಾಡಿ ತಾಯಿಗೆ ಥಳಿಸುತ್ತಿದ್ದ ತಂದೆಯ ವರ್ತನೆಯಿಂದ ಬೇಸರಗೊಂಡು 17 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಬರ್ವಾ ಪೊಲೀಸ್ ಠಾಣೆಯ ಉಸ್ತುವಾರಿ ನಿರ್ಮಲ್ ಶ್ರೀನಿವಾಸ್ ತಿಳಿಸಿದ್ದಾರೆ.
ಪತ್ರ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ತಂದೆ ನಿತ್ಯ ಕುಡಿದು ಬಂದು ತಾಯಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾಳೆ.
ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪವನ್ನು ನಿರಾಕರಿಸಿರುವ ನಿರ್ಮಲ್, ದೂರು ಬಂದ ಬಳಿಕ ಅವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿದ್ದೆವು ಎಂದು ಹೇಳಿದ್ದಾರೆ.
ಈ ಹಿಂದೆ ದೂರು ನೀಡಿದಾಗ ಪೊಲೀಸರು ಬಾಲಕಿಯ ತಂದೆಯನ್ನು ಬಂಧಿಸಿದ್ದರು. ಈಗ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಾರ್ಗೋನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ತಿಳಿಸಿದ್ದಾರೆ.