ಕೋಲ್ಕತ್ತಾ: ಕೋಲ್ಕತ್ತಾದ ಹರೀಶ್ ಚಟರ್ಜಿ ಸ್ಟ್ರೀಟ್ನಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದೂಕು ಹಿಡಿದು ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ.
ಇಂದು ಬೆಳಿಗ್ಗೆ 11:30 ರ ಸುಮಾರಿಗೆ ಮಮತಾ ಬ್ಯಾನರ್ಜಿಯವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವ್ಯಕ್ತಿಯು ಬಂದೂಕು ಮತ್ತು ಚಾಕು ಹಿಡಿದುಕೊಂಡು ಮನೆಗೆ ನುಗ್ಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ತಡೆದು, ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಶೇಖ್ ನೂರ್ ಎಂದು ಗುರುತಿಸಲಾಗಿದೆ. ವ್ಯಕ್ತಿ ಪೊಲೀಸರಂತೆ ನಟಿಸಿ ಕಪ್ಪು ಕಾರಿನಲ್ಲಿ ಬಂದಿದ್ದು, ಮಮತಾ ನಿವಾಸದ ಬಳಿಯ ಲೇನ್ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ.
ಈತ ವಿವಿಧ ಭದ್ರತಾ ಏಜೆನ್ಸಿಗಳಿಗೆ ಸೇರಿದ ಹಲವಾರು ನಕಲಿ ಗುರುತಿನ ಚೀಟಿಗಳನ್ನು ಕೂಡ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಅನುಮಾನಗೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.