ನವದೆಹಲಿ: ಪ್ರಜಾಪ್ರಭುತ್ವದ ಅತೀ ದೊಡ್ಡ ಜಾತ್ರೆಗೆ ನಾಳೆ ಅಂತಿಮ ತೆರೆ ಬೀಳಲಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.
ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆಯು ಆರಂಭವಾಗಲಿದೆ. ಎಂಟು ಗಂಟೆಗೆ ಅಂಚೆ ಮತವನ್ನು ಮೊದಲು ಎಣಿಕೆ ಮಾಡಲಾಗುತ್ತದೆ. ಇದರ ಬಳಿಕ ಇವಿಎಂ ಮತಗಳನ್ನು 8.30ರ ವೇಳೆಗೆ ಆರಂಭಿಸಲಾಗುವುದು. 9.30ರ ವೇಳೆಗೆ ಟ್ರೆಂಡ್ ತಿಳಿದುಬರುವುದು ಎಂದು ಚುನಾವಣಾ ಆಯುಕ್ತರು ತಿಳಿಸಿದರು.
542 ಲೋಕಸಭಾ ಕ್ಷೇತ್ರಗಳ ಮತ ಎಣೆಕೆಯು ನಡೆಯಲಿದೆ. ಇದರೊಂದಿಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ಕೆಲವು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ಹೊರಬೀಳಲಿದೆ.
ಚುನಾವಣೋತ್ತರ ಸಮೀಕ್ಷೆಯು ಎನ್ ಡಿಎ ಬಹುಮತ ಪಡೆಯಲಿದೆ ಎಂದು ಹೇಳಿದೆ. ಆದರೆ ನಿಜವಾದ ಫಲಿತಾಂಶವು ನಾಳೆ ಹೊರಬೀಳಲಿದ್ದು, ನಾಳೆ ಮಧ್ಯಾಹ್ನ ವೇಳೆ ಯಾವ ಪಕ್ಷವು ಗದ್ದುಗೆ ಏರಲಿದೆ ಎಂದು ತಿಳಿದುಬರಲಿದೆ.