ಶಿಮ್ಲಾ: ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾ ಕಡೆಗೆ ಬರುತ್ತಿದ್ದ ಬಸ್ ಒಂದು ಚೈಲಾ ಎಂಬಲ್ಲಿ ಕಣಿವೆಗೆ ಉರುಳಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 26 ಮಂದಿಗೆ ಗಾಯಗಳಾಗಿವೆ. ಬಸ್ ನಲ್ಲಿ ಸುಮಾರು 33 ಪ್ರಯಾಣಿಕರಿದ್ದು, ಅಪಘಾತದ ವೇಳೆ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ಈ ಘೋರ ಅನಾಹುತ ಸಂಭವಿಸಿದ್ದು, ಶಿಮ್ಲಾದಿಂದ 42 ಕಿ.ಮೀ. ದೂರದಲ್ಲಿರುವ ತೋಘ್-ಹಟ್ಕೊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಇದನ್ನು ನೋಡಿದ ಕಾರು ಚಾಲಕರೊಬ್ಬರು ತೋಘ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಗಾಯಾಳುಗಳನ್ನು ತೋಘ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡವರನ್ನು ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ.