ಹೊಸದಿಲ್ಲಿ: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ನಲುಗಿರುವ ದೇಶದ ಜನತೆಗೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಕಾದಿದೆ. ಹೌದು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇದನ್ನು ಸಹಿಸಿಕೊಳ್ಳಲು ಜನ ಸಿದ್ಧರಾಗಬೇಕಾಗಿದೆ.
ಶುಕ್ರವಾರದಿಂದಲೇ ಸಹಾಯಧನದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 2.34 ರೂ. ಏರಿಸಲಾಗಿದೆ. ಜತೆಗೆ ಸಹಾಯಧನ ರಹಿತವಾದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 48 ರೂ.ಗೆ ಏರಿಸಲಾಗಿದೆ.
ಹಾಗಾಗಿ 14.2 ಕಿಲೋ ತೂಕದ ಸಹಾಯಧನ ಸಹಿತವಾದ ಎಲ್ಪಿಜಿ ಸಿಲಿಂಡರ್ ನ ಬೆಲೆ ಶುಕ್ರವಾರದಿಂದಲೇ ದಿಲ್ಲಿಯಲ್ಲಿ 493.55 ರೂ. ಆಗಿದೆ. ಸಹಾಯಧನ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 698.50 ರೂ. ಆಗಿದೆ.
ಸಹಾಯಧನ ಸಹಿತ ಮತ್ತು ಸಹಾಯಧನ ರಹಿತ ಅನುಕ್ರಮದಲ್ಲಿ ಈ ದರಗಳು ಕೋಲ್ಕತ್ತದಲ್ಲಿ 496.65, 723.50 ರೂ, ಮುಂಬಯಿಯಲ್ಲಿ 481.84, 671.50 ರೂ. ಮತ್ತು ಚೆನ್ನೈನಲ್ಲಿ 481.84 ಮತ್ತು 712.50 ರೂ. ಆಗಿವೆ.
ದೇಶದಲ್ಲಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 12 ಅಡುಗೆ ಅನಿಲ ಸಿಲಿಂಡರ್ಗಳು ಸಹಾಯಧನ ಬೆಲೆಯಲ್ಲಿ ಪೂರೈಕೆಯಾಗುತ್ತಿವೆ.