ಶಿವಮೊಗ್ಗ: ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ವಿಚಾರ ಹಗುರವಾಗಿ ತೆಗೆದುಕೊಳ್ಳಲು ಬರೋದಿಲ್ಲ. ಯಾರು ಇದನ್ನು ಮಾಡಿದ್ದಾರೆ ಪತ್ತೆ ಹಚ್ಚುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಾಗರದಲ್ಲಿ ಅವರು ಸುಧ್ದಿಗಾರರೊಂದಿಗೆ ಮಾತನಾಡಿ, ಶಾಲೆಗಳಿಗೆ ರಕ್ಷಣೆ ಕೊಡಲು ನಾವು ಮಾತನಾಡಿದ್ದೇವೆ. ಇದನ್ನು ಹಗುರವಾಗಿ ತೆಗೆದುಕೊಳ್ಳುವ ಮಾತಿಲ್ಲ. ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಮೇಲೆ ವಿಶ್ವಾಸ ಇಡಬೇಕು. ಯಾರು ಈ ಮೇಲ್ ಕಳಿಸಿದ್ದಾರೆ ಅವರನ್ನು ಬಿಡುವ ಪ್ರಶ್ನೆ ಇಲ್ಲ. ಪೋಷಕರು ಧೈರ್ಯವಾಗಿರಬೇಕು ಎಂದರು. ನನ್ನ ಇಲಾಖೆ ಬಗ್ಗೆ ನಾನು ಮುತುವರ್ಜಿ ವಹಿಸಿದ್ದೇನೆ. ಮಕ್ಕಳಿಗೆ ಶಾಲೆಗಳಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಡಿಸಿಎಂ ಅವರು ಸಹ ಶಾಲೆಗೆ ಭೇಟಿ ನೀಡಲಿದ್ದಾರೆ. ನಾನು ಸಹ ಸಂಜೆ ಬೆಂಗಳೂರಿಗೆ ಹೋಗುತ್ತೇನೆ. ಈಗಾಗಲೇ ಅಧಿಕಾರಿಗಳ ಜೊತೆ ಮಾಹಿತಿ ತಗೊಂಡಿದ್ದೇನೆ ಎಂದರು.
ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಂಡರು. ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಎಲ್ಲ ಸ್ವಾಡ್ಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು, ಶಾಲಾ ಸುತ್ತಮುತ್ತ ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು. ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಮಾಹಿತಿ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಬೆದರಿಕೆ ಬಂದಿರುವ 15 ಶಾಲೆಗಳಲ್ಲಿಯೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಎಂದರು.