News Karnataka Kannada
Sunday, April 28 2024
ಮಂಗಳೂರು

ಉಜಿರೆ: ದೆಹಲಿಯ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಎಸ್.ಡಿ.ಎಂ ಎನ್‌ಸಿಸಿಯ 7 ಕೆಡೆಟ್‌ಗಳ ಆಯ್ಕೆ

7 cadets of SDM NCC selected for Republic Day parade in Delhi
Photo Credit : News Kannada

ಉಜಿರೆ: 74ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಏಳು ಎನ್‌ಸಿಸಿ ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವದ ಪಥಸಂಚಲನ, ಶಿಪ್ ಮಾಡೆಲಿಂಗ್, ಗಾರ್ಡ್ ಆಫ್ ಹಾನರ್, ಪ್ರಧಾನಿ ನಿವಾಸದಲ್ಲಿ ಆಯೋಜಿತವಾಗುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಧಾನಮಂತ್ರಿ ರ‍್ಯಾಲಿಯ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ತಂಡಗಳಲ್ಲಿ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಪ್ರಾಶಸ್ತ್ಯ ಪಡೆದಿದ್ದಾರೆ.

ಕಾಲೇಜಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಲೇಜಿನ ಏಳು ಕೆಡೆಟ್‌ಗಳು ರಾಷ್ಟ್ರಮಟ್ಟದ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ, ಮಡಿಕೇರಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಎನ್‌ಸಿಸಿ ಮಂಗಳೂರು ವಲಯದಲ್ಲಿ ಒಂದೇ ಕಾಲೇಜಿನ ಏಳು ಕೆಡೆಟ್‌ಗಳು ಪ್ರತಿನಿಧಿಸುತ್ತಿರುವುದು ವಿಶಿಷ್ಟ ಸಾಧನೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶಕ್ಕಾಗಿ ಎನ್‌ಸಿಸಿ ಕೆಡೆಟ್‌ಗಳನ್ನು ಆಯ್ಕೆ ಮಾಡಲು ರಾಜ್ಯದ ಮೂಡುಬಿದ್ರೆಯಲ್ಲಿ ಮೂರು ಪ್ರಿ ಐಜಿಸಿ ಕ್ಯಾಂಪ್ ನಡೆಸಲಾಗಿತ್ತು. ತದನಂತರ ಬೆಂಗಳೂರಿನಲ್ಲಿ ಐಜಿಸಿ ಶಿಬಿರ ಮತ್ತು ಮೂರು ಪ್ರಿ ಆರ್‌ಡಿಸಿ ಮತ್ತು ಕೊನೆಯಲ್ಲಿ ಕಿಟಿಂಗ್ ಕ್ಯಾಂಪ್ ಸೇರಿದಂತೆ ಒಟ್ಟು ಎಂಟು ಬಗೆಯು ಕಠಿಣ ಆಯ್ಯೆ ಪ್ರಕ್ರಿಯೆಯ ಶಿಬಿರಗಳನ್ನು ನಡೆಸಲಾಗಿತ್ತು. ಈ ಶಿಬಿರಗಳ ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಕಾಲೇಜಿನ ಎನ್‌ಸಿಸಿ ವಿಭಾಗದ ಒಟ್ಟು 7 ಕೆಡೆಟ್‌ಗಳು
ಆಯ್ಕೆಯಾಗಿದ್ದಾರೆ. ಈ ಆಯ್ಕೆ ಶಿಬಿರಗಳಲ್ಲಿ ಕಾಲೇಜಿನ ಒಟ್ಟು 30 ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದರು.

ಪ್ರತಿವರ್ಷ ದೆಹಲಿಯಲ್ಲಿ ಆಯೋಜಿತವಾಗುವ ಗಣರಾಜ್ಯೋತ್ಸವದ ಪಥಸಂಚಲನ ಕಾರ್ಯಕ್ರಮಕ್ಕಾಗಿ ಕಾಲೇಜಿನ ಒಬ್ಬರು ಅಥವಾ ಇಬ್ಬರು ಕೆಡೆಟ್‌ಗಳು ಆಯ್ಕೆಯಾಗುತ್ತಿದ್ದರು. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಾಲೇಜಿನ ಕೆಡೆಟ್‌ಗಳು ನಿಯೋಜಿತರಾಗಿರುವುದು ವಿಶೇಷ. ಪ್ರಸಕ್ತ ವರ್ಷ ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗಿದೆ. ಇಲ್ಲಿ ಪ್ರಪಥಮವಾಗಿ ನಡೆಯುತ್ತಿರುವ ಪಥಸಂಚಲನದಲ್ಲಿ ಕಾಲೇಜಿನ ಎನ್‌ಸಿಸಿ ಆರ್ಮಿ 2 ವಿಭಾಗದ ಕೆಡೆಡ್ ರಕ್ಷಿತ್ ಎಂ.ಜಿ ಗಣರಾಜ್ಯೋತ್ಸವ ಪರೇಡ್‌ನ ಎನ್.ಸಿ.ಸಿ ಕಂಟಿಂಜೆಂಟುನ್ನು ಪ್ರತಿನಿಧಿಸಿದ್ದಾನೆ.

ಶಿಪ್ ಮಾಡೆಲಿಂಗ್ ಪ್ರದರ್ಶನವು ಗಣರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿರುತ್ತದೆ. ರಾಷ್ಟçದ ವಿವಿಧ ರಾಜ್ಯಗಳ ಎನ್‌ಸಿಸಿ ಕೆಡೆಟ್‌ಗಳು ಸಿದ್ಧಪಡಿಸಿದ ಹಡಗಿನ ಮಾದರಿಗಳನ್ನು ಪರಿಶೀಲಿಸಿ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕಾಗಿ ಅತ್ಯುತ್ತಮ ಎನ್ನಿಸುವಂಥವನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ರಾಜ್ಯದಿಂದ ಮೂವರು ಕೆಡೆಟ್‌ಗಳ ಮಾದರಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ವಿಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಮತ್ತು ಗೋವಾದಿಂದ ಆಯ್ಕೆಯಾದ ಮೂವರು ಕೆಡೆಟ್‌ಗಳಲ್ಲಿ ಎಸ್.ಡಿ.ಎಂ ಕಾಲೇಜಿನ ಎನ್‌ಸಿಸಿಯ ನೌಕಾವಿಭಾಗದ ಇಬ್ಬರು ಕೆಡೆಟ್‌ಗಳಾದ ಶ್ರೀರಾಮ ಮರಾಠೆ ಮತ್ತು ಅನನ್ಯಾ ಕೆ.ಪಿ ಇದ್ದಾರೆ.

ಗಣರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮದಲ್ಲಿ ದೇಶದ ಗಣ್ಯಮಾನ್ಯರು ಪಾಲ್ಗೊಳ್ಳುತ್ತಾರೆ. ಅವರಿಗೆ ಗೌರವಪೂರ್ವಕ ನಡೆಯೊಂದಿಗೆ ಸ್ವಾಗತಿಸಲು ಗಾರ್ಡ್ ಆಫ್ ಹಾನರ್ ನೀಡಲಾಗುತ್ತದೆ. ಇದಕ್ಕಾಗಿ ರಾಷ್ಟ್ರದ ವಿವಿಧ ರಾಜ್ಯಗಳ ಕೆಡೆಟ್‌ಗಳ ಗಾರ್ಡ್ ಆಫ್ ಹಾನರ್ ಶೈಲಿಯನ್ನು ಪರಿಶೀಲಿಸಲು ವಿವಿಧ ಹಂತಗಳ ಪರೀಕ್ಷೆ ನಡೆಯುತ್ತದೆ. ಈ ಸಿದ್ಧತಾ ಪರೀಕ್ಷೆಯಲ್ಲಿ ಕಾಲೇಜಿನ ಎನ್‌ಸಿಸಿಯ ನೌಕಾವಿಭಾಗದ ಕೆಡೆಟ್ ಮೊಹಮ್ಮದ್ ನವಾಜ್, ಕೆಡೆಟ್ ಹೇಮಂತ್, ಆರ್ಮಿ ವಿಭಾಗದ ಕೆಡೆಟ್ ದೀಕ್ಷಿತ್ ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರಧಾನಿ ನಿವಾಸದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗುತ್ತದೆ. ಈ ಕಾರ್ಯಕ್ರಮಕ್ಕಾಗಿ ರಾಷ್ಟçದ ವಿವಿಧ ರಾಜ್ಯಗಳ ಎನ್.ಸಿ.ಸಿ.ಕೆಡೆಟ್‌ಗಳ ಪ್ರತಿಭಾ ಸಾಮರ್ಥ್ಯವನ್ನು ಪರೀಕ್ಷಿಸುವ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಎಸ್.ಡಿ.ಎಂ ಎನ್.ಸಿ.ಸಿಯ ಆರ್ಮಿ ವಿಭಾಗದ ಕೆಡೆಟ್ ಭರತ್ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿನೂತನ ಮಾದರಿಗಳು ಪ್ರದರ್ಶಿತವಾಗುತ್ತವೆ. ಈ ಸಂದರ್ಭದಲ್ಲಿ ಕರ್ನಾಟಕದ ಪ್ರಾದೇಶಿಕ ಅನನ್ಯತೆಗೆ ಕನ್ನಡಿ ಹಿಡಿಯುವ ನೃತ್ಯ ಪ್ರದರ್ಶನದೊಂದಿಗೆ ಭರತ್ ಗಮನ ಸೆಳೆಯಲಿದ್ದಾರೆ.

ಗಣರಾಜ್ಯೋತ್ಸವಕ್ಕೆ ಆಯ್ಕೆಯಾದ ಕಾಲೇಜಿನ ಎನ್‌ಸಿಸಿ ವಿಭಾಗದ ಈ ಏಳು ಕೆಡೆಟ್‌ಗಳು ಜನವರಿ 28ರಂದು ದೆಹಲಿಯ ಜನರಲ್ ಕಾರ್ಯಪ್ಪ ಪರೇಡ್ ಗ್ರೌಂಡ್‌ನಲ್ಲಿ ನಡೆಯುವ ಪ್ರಧಾನಮಂತ್ರಿ ರ‍್ಯಾಲಿಯಲ್ಲಿ ಕೂಡಾ ಭಾಗವಹಿಸಲಿದ್ದಾರೆ. ಎಸ್.ಡಿ.ಎಂ ಕಾಲೇಜಿನ ನೌಕಾ ವಿಭಾಗದ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ಆರ್ಮಿ ಎನ್.ಸಿ.ಸಿ ಅಧಿಕಾರಿಗಳಾದ 3 ಲೆಫ್ಟಿನೆಂಟ್ ಭಾನುಪ್ರಕಾಶ್ ಮತ್ತು ಲೆಫ್ಟಿನೆಂಟ್ ಶುಭಾರಾಣಿ ಹಾಗೂ ಹಿರಿಯ ಎನ್.ಸಿ.ಸಿ ಕೆಡೆಟ್‌ಗಳು ತರಬೇತಿ ನೀಡಿದ್ದರು. 2001 ರಿಂದ ಈವರೆಗೆ ಕಾಲೇಜಿನ ನೆವಲ್ ವಿಭಾಗದಿಂದ ಒಟ್ಟು 37 ಕೆಡೆಟ್ ಗಳು ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು