News Karnataka Kannada
Tuesday, April 30 2024
ಮಂಗಳೂರು

ಉಜಿರೆ ಎಸ್.ಡಿ.ಎಂ.ನಲ್ಲಿ ‘ನಮ್ಮೊಂದಿಗೆ ಆಯುಕ್ತರು’ ಕಾರ್ಯಕ್ರಮ

'Commissioner with us' programme at Ujire SDM
Photo Credit : News Kannada

ಉಜಿರೆ: ಸ್ಪರ್ಧಾತ್ಮಕ ಪರೀಕ್ಷೆಗಳು ನಿರೀಕ್ಷಿಸುವ ಗುಣಮಟ್ಟದ ಉತ್ತರಗಳನ್ನು ಬರೆಯುವುದಕ್ಕೆ ಬೇಕಾದ ಸಮಗ್ರ ಆಯಾಮದ ಪೂರ್ವ ಸಿದ್ಧತೆಯ ಸ್ವಯಂಸೂತ್ರವನ್ನು ಕಂಡುಕೊಳ್ಳುವುದರಲ್ಲಿಯೇ ನಿಜವಾದ ಯಶಸ್ಸಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಧೇಶ್ವರ ಕಾಲೇಜಿನ ‘ಸಮ್ಯಕ್ ದರ್ಶನ’ ಸಭಾಂಗಣದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಮತ್ತು ಶಿಸ್ತು ಸಮಿತಿ ಆಯೋಜಿಸಿದ್ದ ‘ನಮ್ಮೊಂದಿಗೆ ಆಯುಕ್ತರು’ ಮಾರ್ಗದರ್ಶನ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು.

ಪರೀಕ್ಷೆಯ ಸಿದ್ಧತೆಯ ಸಂದರ್ಭದಲ್ಲಿ ಆದ್ಯತಾನುಸಾರ ನಡೆಸುವ ಅಧ್ಯಯನ ಪ್ರಮುಖ ಪಾತ್ರವಹಿಸುತ್ತದೆ. ಪರೀಕ್ಷಾ ತಯಾರಿಗೆ ಯಾವ ಪುಸ್ತಕಗಳು ಹೆಚ್ಚು ಸೂಕ್ತ ಎಂಬುದನ್ನು ಕೂಲಂಕುಷವಾಗಿ ಅರಿತುಕೊಂಡು ಓದಬೇಕು. ಹಾಗಾದಾಗ ಓದಿಗಾಗಿ ವಿನಿಯೋಗಿಸುವ ಸಮಯ ಪ್ರಯೋಜನಕಾರಿ ಎನ್ನಿಸುತ್ತದೆ. ಇಂಥ
ಸಮಯ ಪ್ರಜ್ಞೆಯು ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ರೂಢಿಸುತ್ತದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಕೆಲವರು ವ್ಯಂಗ್ಯದ ಮಾತುಗಳನ್ನಾಡುತ್ತಾರೆ. ಸಿದ್ಧತೆಯಲ್ಲಿ
ತೊಡಗಿಕೊಂಡದ್ದನ್ನೇ ಟೀಕಿಸುತ್ತಾರೆ. ಅಂತಹ ವ್ಯಂಗ್ಯ ಮತ್ತು ಟೀಕೆಗಳ ಕಡೆಗೆ ಗಮನ ನೀಡದೆ ಅಧ್ಯಯನದೆಡೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಎಲ್ಲರೂ ಎಲ್ಲಾ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಲು ಸಾಧ್ಯವಿಲ್ಲ. ತಮ್ಮ ಆಸಕ್ತಿ ವಿಚಾರಗಳನ್ನು ಗ್ರಹಿಸಿಕೊಂಡು ಅದರತ್ತ ಏಕಾಗ್ರತೆಯಿಂದ ಪ್ರಯತ್ನಿಸಿದಾಗ ನಮ್ಮ ಗುರಿ ತಲುಪಬಹುದು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರತಿ಼ಷ್ಠೆಗಾಗಿ ಬರೆಯದೆ ಸ್ವಯಂ ಇಚ್ಛಾಶಕ್ತಿಯಿಂದ ಪಾಲ್ಗೊಳ್ಳಬೇಕು. ಹಾಗಾದಾಗ ಮಾತ್ರ ಸಮಯ ಪಾಲನೆಯೊಂದಿಗೆ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು.

ಸಮಾಜ ನಮ್ಮಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದಕ್ಕೆ ಹೆಚ್ಚು ಗಮನಕೊಡದೆ ನಮ್ಮ ಗೆಲುವಿಗಾಗಿ ಹೇಗೆ ಕಾರ್ಯೋನ್ಮುಖರಾಗುತ್ತೇವೆ ಎಂಬುದನ್ನು ಆಲೋಚಿಸಬೇಕು. ಇಂತಹ ಮನವರಿಕೆ ಪ್ರಯೋಗಾತ್ಮಕ
ನೆಲೆಯಲ್ಲಿ ಬದುಕುವಂತೆ ಉತ್ತೇಜಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಎಸ್.ಡಿ.ಎಂ ಕಾಲೇಜು ಸದಾ ಒಂದಿಲ್ಲೊಂದು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇಂತಹ ಕಾರ್ಯಕ್ರಮಗಳು ಶೈಕ್ಷಣಿಕ ಕ್ಷಮತೆಯನ್ನು ಇಮ್ಮಡಿಗೊಳಿಸುತ್ತವೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎ ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಯೋಜಕ ಡಾ.ಮಹೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಯೋಜಕ ಡಾ. ನವೀನ್ ಕುಮಾರ್ ಜೈನ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರವಣ್ ಹಾಗೂ ಶ್ರಾವ್ಯ ನಿರೂಪಿಸಿದರು.

ವರದಿ: ರಕ್ಷಾ ಕೋಟ್ಯಾನ್
ಎಸ್.ಡಿ. ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು