ಬೆಳ್ತಂಗಡಿ : ವ್ಯಕ್ತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕೊಯ್ಯೂರು ಗ್ರಾಮದ ಬೀಜದಡಿ ನಿವಾಸಿ ವೆಂಕಪ್ಪ ಗೌಡ (40) ಹಲ್ಲೆಗೊಳಗಾದವರು. ಪ್ರಮೋದ್ ಎಂಬಾತ ಆರೋಪಿ.
ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಮೋದ್, ವೆಂಕಪ್ಪ ಅವರ ಮನೆಗೆ ನುಗ್ಗಿ ಮರದ ದೊಣ್ಣೆಯಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ವೆಂಕಪ್ಪ ಗೌಡರ ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದು ಗೌಡರನ್ನು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಆರೋಪಿ ಪ್ರಮೋದ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಈ ಹಿಂದೆ ವೆಂಕಪ್ಪ ಗೌಡ ಹಾಗೂ ಅವರ ಸಹೋದರನ ಮೇಲೆ ತಲವಾರು ದಾಳಿ ನಡೆಸಿದ್ದ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.