ಬೀದರ್: ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯ ಮೇಲ್ಭಾಗದ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಈ ಕಾರಣದಿಂದ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ ತಲುಪುವ ಸಂಭವ ಕಂಡಲ್ಲಿ ತಕ್ಷಣ ಕಾರಂಜಾ ಜಲಾಶಯದ ಗೇಟಗಳನ್ನು ತೆರೆದು ನದಿಗೆ ನೀರು ಬಿಡಲಾಗುವುದು.
ನೀರು ಹರಿಬಿಟ್ಟಲ್ಲಿ ಜಲಾಶಯದ ಕೆಳಭಾಗದ ಗ್ರಾಮಗಳಿಗೆ ನದಿ ಪ್ರವಾಹದಿಂದ ತೊಂದರೆ ಉಂಟಾಗಲಿದೆ. ಈ ಕಾರಣದಿಂದ ನದಿಯ ಕೆಳಭಾಗದ ತಳಪಾತ್ರದ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ ಮಾಡಬಾರದು. ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನೀತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಸಂರಕ್ಷಿಸಿಕೊಳ್ಳಲು ಮುಂಜಾಗೃತೆ ವಹಿಸಿಕೊಳ್ಳುವಂತೆ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.