Bengaluru 22°C
Ad

ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

ಚಾಮರಾಜನಗರ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಹೊರ ವಲಯದ ಮೂಡ್ಲುಪುರ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಗುಂಡ್ಲುಪೇಟೆ: ಚಾಮರಾಜನಗರ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಹೊರ ವಲಯದ ಮೂಡ್ಲುಪುರ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ನಗರದ ಮೂಡ್ಲುಪುರ ಬಳಿಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಚಾಮರಾಜನಗರ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯ ಮೂಲಕ ಸಿಮ್ಸ್ ಆಸ್ಪತ್ರೆಗೆ ರೋಗಿಗಳು, ಗಾರ್ಮೆಂಟ್ಸ್‌ ಗೆ ಮಹಿಳೆಯರು ಹಾಗೂ ಶಾಲಾ, ಕಾಲೇಜುಗಳಿಗೆ ಮಕ್ಕಳು ತೆರಳುತ್ತಾರೆ.

ಮೂಡ್ಲುಪುರ ಬಳಿ ಗುಂಡಿ ಬಿದ್ದು 3 ವರ್ಷಗಳೇ ಕಳೆದು ಹೋಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗುಂಡಿ ಮುಚ್ಚಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿಲ್ಲ. ರಸ್ತೆಯ ದುಸ್ಥಿತಿ ಕಂಡರೂ ಕೂಡ ಪೊಲೀಸರು ಇಲಾಖೆಯ ಅಧಿಕಾರಿಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸದೇ ಸುಮ್ಮನಿರುವುದು ದುರಂತ ಎಂದರು.ರಸ್ತೆಯಲ್ಲಿ ಓಡಾಡುವವರು ಬಿದ್ದು ಪ್ರಾಣ ಕಳೆದುಕೊಂಡರೆ ಯಾರು ಜವಬ್ದಾರಿಯಾಗುತ್ತಾರೆ.

ರಾಷ್ಟ್ರಪತಿ ಸೇರಿದಂತೆ ಮುಖ್ಯಮಂತ್ರಿಗಳು, ಸಚಿವರು ಬಂದರೆ ರಸ್ತೆ ರಿಪೇರಿ ಮಾಡಿಸಲು ಮುಂದಾಗುವ ಇಲಾಖೆಯ ಅಧಿಕಾರಿಗಳು ಅಪಘಾತಗಳು ಸಂಭವಿಸುವ ಸ್ಥಿತಿಯಲ್ಲಿದ್ದರೂ ರಸ್ತೆ ದುರಸ್ತಿಗೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ರಸ್ತೆಯಲ್ಲಿನ ಗುಂಡಿ ಮುಚ್ಚಿಸಿ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಎಇಇ ರಮೇಶ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಇಲ್ಲಿಯ ತನಕ ಎಲ್ಲಿಗೆ ಹೋಗಿದ್ರಿ. ರಸ್ತೆ ದುರಸ್ತಿಗೆ ಯಾಕೆ ಮಾಡಿಸಿಲ್ಲ. ನಾವು ಕೂಡ ನಿಮಗೆ ಲಂಚ ಕೊಡಬೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಇಇ ರಮೇಶ್, ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಟೆಂಡ‌ರ್ ಅಪೂವಲ್ ಆಗಿರಲಿಲ್ಲ.

ಇಂದಿನಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಇಇ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು. ಇಇ ಅವರು ಬೆಂಗಳೂರಿಗೆ ಹೋಗಿದ್ದು ಇಂದಿನಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಜೆಸಿಬಿ ಮೂಲಕ ರಸ್ತೆ ದುರಸ್ತಿಗೆ ಆರಂಭಿಸಲಾಯಿತು.

Ad
Ad
Nk Channel Final 21 09 2023
Ad