ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿದೇಶ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನೊಂದು ತಿಂಗಳಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಿರುವ ಬಿಎಸ್ವೈ, ಅದಕ್ಕಾಗಿ ನೂತನ ಕಾರೊಂದನ್ನು ಖರೀದಿಸಿದ್ದಾರೆ. 1 ಕೋಟಿ ರೂಪಾಯಿ ಬೆಲೆ ಬಾಳುವ ದುಬಾರಿ ಟಯೋಟಾ ವೆಲ್ಫೈರ್ ಕಾರನ್ನು ಬಿಎಸ್ ಯಡಿಯೂರಪ್ಪ ಖರೀದಿ ಮಾಡಿದ್ದಾರೆ. ಇದೇ ಕಾರಿನಲ್ಲಿ ನಿನ್ನೆ ಏರ್ಪೋರ್ಟ್ನಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ಬಿಳಿಯ ಬಣ್ಣದ KA -05- ND – 4545 ನೊಂದಣಿ ಸಂಖ್ಯೆಯ ಹೊಸ ಟಯೋಟಾ ವೆಲ್ಫೈರ್ ವಾಹನ ಇದಾಗಿದೆ.
ನಿನ್ನೆ ವಿದೇಶದಿಂದ ಆಗಮಿಸಿದ ಬಿಎಸ್ವೈ ಅವರನ್ನು ಬರಮಾಡಿಕೊಳ್ಳಲು ಅವರ ಸಿಬ್ಬಂದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಕಾರು ತಂದಿದ್ದರು. ಕಳೆದ ಗುರುವಾರ ಬಿಎಸ್ವೈ ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್ ಗೆ ಪ್ರವಾಸಕ್ಕೆ ತೆರಳಿದ್ದರು. ಐದು ದಿನಗಳ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾತ್ರಿ 8.15 ಕ್ಕೆ ಎಸ್ವೈ ಹಾಗೂ ಕುಟುಂಬ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಜಕೀಯ ಜಂಜಾಟ ಮರೆತು ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದರು.
ಮಾಲ್ಡೀವ್ಸ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಬಿಎಸ್ವೈ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇನ್ನೂ 20- 25 ದಿನಗಳ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಜಿಲ್ಲಾವಾರು ಭೇಟಿ ನೀಡಿ ಕಾರ್ಯಕರ್ತರ ಜೊತೆ ಸಭೆ ಮಾಡುತ್ತೇನೆ. ಒಂದು ಜಿಲ್ಲೆಗೆ ಒಂದು ದಿನ ಹೋಗುತ್ತೇನೆ. ಬಹಳ ವರ್ಷಗಳ ಬಳಿಕ ನಾನು ವಿದೇಶ ಪ್ರವಾಸ ಹೋಗಿದ್ದೆ. ಸ್ನೇಹಿತರು, ಕುಟುಂಬಸ್ಥರ ಒತ್ತಾಯದ ಮೇರೆಗೆ ಹೋಗಿದ್ದೆ. ಮಾಲ್ಡೀವ್ಸ್ ಒಳ್ಳೆಯ ಸ್ಥಳ, ಎಲ್ಲರೂ ನೋಡುವಂತದ್ದು, ನಾನು ಕೂಡ ಖುಷಿ ಪಟ್ಟೆ ಎಂದು ಹೇಳಿದರು.