ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಕಳೆದ ವಾರ ನಿತ್ಯ ಸರಾಸರಿ 44,400 ಮಂದಿಗೆ ಲಸಿಕೆ ನೀಡಲಾಗುತ್ತಿತ್ತು. ಶನಿವಾರ ಒಂದೇ ದಿನ 89,075 ಮಂದಿಗೆ ಲಸಿಕೆ ನೀಡಲಾಗಿದೆ.
‘ಇತ್ತೀಚಿನ ದಿನಗಳಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೇಡಿಕೆ ಪೂರೈಸುವಷ್ಟು ಲಸಿಕೆ ನಮಗೆ ಹಂಚಿಕೆಯಾಗುತ್ತಿರಲಿಲ್ಲ. ಪಾಲಿಕೆಗೆ ಹಂಚಿಕೆ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಕೋರಿದ್ದೆವು. ನಮ್ಮ ಕೋರಿಕೆಯನ್ನು ಮನ್ನಿಸಿ ಸರ್ಕಾರವು ಲಸಿಕೆ ಪೂರೈಕೆ ಹೆಚ್ಚಿಸಿದ್ದರಿಂದ ಕೊರತೆ ನೀಗಿದೆ. ಲಸಿಕೆ ವಿತರಣೆ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಲಸಿಕೆ ಕೇಂದ್ರಕ್ಕೆ ಬಂದವರು ಲಸಿಕೆ ಹಾಕಿಸಿಕೊಳ್ಳದೆಯೇ ಮರಳುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.