Bengaluru 22°C
Ad

ವಿಶ್ವ ಥೈರಾಯ್ಡ್ ದಿನ: ಚಿಟ್ಟೆ ಗ್ರಂಥಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ಮಾಹಿತಿ

ಥೈರಾಯ್ಡ್ ಕಾಯಿಲೆಗಳು ವಿಶ್ವದ ಸಾಮಾನ್ಯ ಅಂತಃಸ್ರಾವಕ ಅಸ್ವಸ್ಥತೆಗಳಲ್ಲಿ ಒಂದಾಗಿದೆ ಮತ್ತು ಭಾರತವು ಇದಕ್ಕೆ ಹೊರತಾಗಿಲ್ಲ

ಥೈರಾಯ್ಡ್ ಕಾಯಿಲೆಗಳು ವಿಶ್ವದ ಸಾಮಾನ್ಯ ಅಂತಃಸ್ರಾವಕ ಅಸ್ವಸ್ಥತೆಗಳಲ್ಲಿ ಒಂದಾಗಿದೆ ಮತ್ತು ಭಾರತವು ಇದಕ್ಕೆ ಹೊರತಾಗಿಲ್ಲ. ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಅಂಡ್ ಮೆಟಾಬಾಲಿಸಮ್[1] ನಲ್ಲಿ ಪ್ರಕಟವಾದ 2011 ರ ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು 42 ಮಿಲಿಯನ್ ಜನರು ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಎಂಥ ಲಕ್ಷಣಗಳ ಬಗ್ಗೆ ಜಾಗ್ರತೆ ವಹಿಸಬೇಕು? ಯಾವೆಲ್ಲ ಸಮಸ್ಯೆಗಳು ತಲೆದೋರಿದರೆ ಥೈರಾಯ್ಡ್‌ ಕ್ಷಮತೆಯ ಬಗ್ಗೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯವಾಗುತ್ತದೆ? ಆರಂಭದಲ್ಲೇ ಈ ಸಮಸ್ಯೆಯನ್ನು ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರ ಲಾಭಗಳೇನು ಎಂಬಿತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ತೂಕದಲ್ಲಿ ವ್ಯತ್ಯಾಸ
ಯಾವುದೇ ಸರಿಯಾದ ಕಾರಣವಿಲ್ಲದಂತೆ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ ಎಚ್ಚರ ಅಗತ್ಯ. ಅಂದರೆ, ಆಹಾರ ಅಥವಾ ವ್ಯಾಯಾಮದಲ್ಲಿ ಯಾವುದೇ ವ್ಯತ್ಯಯವಾಗಿಲ್ಲದಿದ್ದರೂ ತೂಕ ಹೆಚ್ಚಿದೆ ಎಂದಾದರೆ ಹೈಪೋಥೈರಾಯ್ಡ್‌ (ಅಂದರೆ ಕಡಿಮೆ ಇಲ್ಲವೇ ಅಸಮರ್ಪಕ ಥೈರಾಯ್ಡ್‌ ಹಾರ್ಮೋನುಗಳು) ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ವ್ಯಾಯಾಮ ಹೆಚ್ಚಿಸಿಲ್ಲ, ತಿನ್ನುವುದನ್ನೂ ಕಡಿಮೆ ಮಾಡಿಲ್ಲ ಎಂದಾದರೂ ತೂಕ ಇಳಿಯುತ್ತಿದೆ ಎಂದಾದರೆ ಹೈಪರ್‌ (ಹೆಚ್ಚಿನ) ಥೈರಾಯ್ಡ್‌ ಇದೆಯೇ ಪರೀಕ್ಷಿಸಿಕೊಳ್ಳಿ.

ಸುಸ್ತು, ಆಯಾಸ
ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಿದ್ದರೂ ಬೆಳಗ್ಗೆ ಏಳುವಾಗ ಆಯಾಸ ಎನಿಸುತ್ತಿದೆ. ಊಟ-ಉಪಚಾರಗಳು ಸರಿಯಾಗಿಯೇ ಇದ್ದರೂ ಸುಸ್ತು ಬಿಡುತ್ತಿಲ್ಲ ಎಂದಾದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದು ಸೂಕ್ತ. ದೇಹದ ಚಯಾಪಚಯದಲ್ಲಿ ಏರಿಳಿತ ಆಗಿದ್ದಕ್ಕಾಗಿ ಕಾಡುವ ಸುಸ್ತು, ಆಯಾಸಗಳಿವು. ಥೈರಾಯ್ಡ್‌ ಏರಿಳಿತದ ಮುಖ್ಯ ಲಕ್ಷಣಗಳಲ್ಲಿ ಇದೂ ಒಂದು.

ಮೂಡ್‌ ಬದಲಾವಣೆ
ಥೈರಾಯ್ಡ್‌ ಅಸಮತೋಲನದಿಂದ ಮಾನಸಿನ ಆರೋಗ್ಯದಲ್ಲೂ ವ್ಯತ್ಯಾಸ ಕಾಣುವುದು ಸಹಜ. ಥೈರಾಯ್ಡ್‌ ಚೋದಕದ ಉತ್ಪಾದನೆ ಕಡಿಮೆಯಾದರೆ ಬೇಸರ, ಖಿನ್ನತೆ, ಶಕ್ತಿ ಸೋರಿದ ಭಾವಗಳು ಕಾಡುತ್ತವೆ. ಥೈರಾಯ್ಡ್‌ ಚೋದಕದ ಉತ್ಪಾದನೆ ಹೆಚ್ಚಾದರೆ, ಆತಂಕ, ಒತ್ತಡ, ಕಿರಿಕಿರಿ, ಕೋಪಗೊಳ್ಳುವ ಕ್ರಿಯೆಗಳು ಹೆಚ್ಚುತ್ತವೆ. ದೈನಂದಿನ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಮೂಡ್‌ ಮಾತ್ರ ಬದಲಾಗುತ್ತಿದೆ ಎಂದಾದರೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯ

ಹೃದಯ ಬಡಿತ ಏರುಪೇರು
ಥೈರಾಯ್ಡ್‌ ಏರುಪೇರಾಗುವುದು ನೇರವಾಗಿ ಹೃದಯದ ಬಡಿತದ ಮೇಲೂ ಪರಿಣಾಮ ಬೀರುತ್ತದೆ. ಹೈಪೊ ಥೈರಾಯ್ಡ್‌ ಸಂದರ್ಭದಲ್ಲಿ ಬಡಿತ ನಿಧಾನವಾದರೆ, ಹೈಪರ್‌ ಥೈರಾಯ್ಡ್‌ ಇದ್ದಾಗ ಬಡಿತ ತೀವ್ರವಾಗುತ್ತದೆ. ಇವುಗಳನ್ನು ವೈದ್ಯರ ಮಾಮೂಲಿ ದೈಹಿಕ ತಪಾಸಣೆಯಲ್ಲೂ ಪತ್ತೆ ಮಾಡಬಹುದು. ಬಡಿತ ಜೋರಾಗಿದ್ದು ಅನುಭವಕ್ಕೂ ಬರಬಹುದು. ಹಾಗಾಗನಿ ನಿಯಮಿತವಾಗಿ ವೈದ್ಯರ ತಪಾಸಣೆ ಅಗತ್ಯ.

ಕುತ್ತಿಗೆ ದಪ್ಪ
ಥೈರಾಯ್ಡ್‌ ಸಮಸ್ಯೆ ಇದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಕಾಣಬಹುದು. ಅಯೋಡಿನ್‌ ಕೊರತೆಯಾದಾಗ (ಗೊಯಿಟ್ರ್ ರೋಗ), ಥೈರಾಯ್ಡ್‌ ಹಿಗ್ಗಿದಾಗ ಅಥವಾ ಥೈರಾಯ್ಡ್‌ನಲ್ಲಿ ಟ್ಯೂಮರ್‌ಗಳಿದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಅಥವಾ ದಪ್ಪವಾದಂತೆ ಕಾಣುತ್ತದೆ. ಹೀಗೆ ಕಂಡಾಗಲೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

ಬಿಸಿ-ತಣ್ಣ ಹೆಚ್ಚು
ಈ ಎರಡೂ ಹೆಚ್ಚಾಗುತ್ತದೆ. ಚಯಾಪಚಯ ಹೆಚ್ಚಿದಾಗ ಅಥವಾ ಕಡಿಮೆಯಾದಾಗ ಉಷ್ಣತೆ ಮತ್ತು ಚಳಿ ಎರಡನ್ನೂ ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಾತಾವರಣದ ಉಷ್ಣತೆಗೆ ವಿರುದ್ಧವಾಗಿ ಚಳಿ ಅಥವಾ ಸೆಕೆಯ ಅನುಭವ ಆಗುತ್ತಿದ್ದರೆ, ಅತಿಯಾಗಿ ಬೆವರುತ್ತಿದ್ದರೆ, ಸೆಕೆ ಅಸಹನೀಯ ಎನಿಸಿದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದಕ್ಕೆ ಸಕಾಲ.

ಕೂದಲು, ಚರ್ಮ
ಇವುಗಳಲ್ಲೂ ವ್ಯತ್ಯಾಸ ಕಾಣುತ್ತದೆ. ಹೈಪೊ ಥೈರಾಯ್ಡ್‌ ಇದ್ದಾಗ ಕೂದಲು ಮತ್ತು ಚರ್ಮ ಒಣಗಿ ಒರಟಾಗುತ್ತವೆ. ಕೂದಲು ಉದುರುವುದು ಸಾಮಾನ್ಯ. ಹೈಪರ್‌ ಥೈರಾಯ್ಡ್‌ ಇದ್ದರೆ ಕೂದಲು ಉದುರಿ, ಸಪೂರವಾಗುತ್ತದೆ. ಕೂದಲು ಮತ್ತು ಚರ್ಮದ ಆರೋಗ್ಯ ಸರಿಯಾಗಿರುವುದಕ್ಕೂ ಥೈರಾಯ್ಡ್‌ ಚೋದಕಗಳು ಅಗತ್ಯವಾಗಿ ಬೇಕು.

 

Ad
Ad
Nk Channel Final 21 09 2023
Ad