ಡಮಾಸ್ಕಸ್: ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಂಗಳವಾರ ತಡರಾತ್ರಿ ಗಾಜಾ ನಗರದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಹಮಾಸ್ ಉಗ್ರರೇ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಸಿರಿಯಾದ ಮೇಲೂ ಕೂಡ ಇಸ್ರೇಲ್ ದಾಳಿ ನಡೆಸುತ್ತಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಎಂಟು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯನ್ ಮಾಧ್ಯಮಗಳು ಹೇಳಿವೆ. ದಕ್ಷಿಣ ಪ್ರಾಂತ್ಯದ ದಾರಾ ಗ್ರಾಮದಲ್ಲಿ ಸಿರಿಯನ್ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆದಿದೆ.
ಇಸ್ರೇಲ್ ಮಿಲಿಟರಿ ಗಡಿಯಾಚೆಯಿಂದ ಮಿಲಿಟರಿ ಮೂಲ ಸೌಕರ್ಯ ಮತ್ತು ಮಾರ್ಟರ್ ಲಾಂಚರ್ ಗಳ ಮೇಲೆ ದಾಳಿ ನಡೆಸಿದೆ. ಭಾನುವಾರ, ಇಸ್ರೇಲಿ ಪಡೆಗಳು ಅಲೆಪ್ಪೊ ಮತ್ತು ಡಮಾಸ್ಕಸ್ ವಿಮಾನ ನಿಲ್ದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿ ರನ್ವೇ ಗೆ ಹಾನಿ ಮಾಡಿದ್ದವು.