ವಿಜಯದಶಮಿ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳಿಗೆ ಚಾಲನೆ ನೀಡಲಿದ್ದು, ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
ಇಂದು ಮಧ್ಯಾಹ್ನ 12.10ಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ.
ರಕ್ಷಣಾ ಸಚಿವರು, ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ರಕ್ಷಣಾ ಇಲಾಖೆಯಿಂದ ಸ್ಥಾಪನೆಯಾಗಿರುವ 7 ರಕ್ಷಣಾ ಕಂಪನಿಗಳೆಂದರೆ, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್ (TCL), ಯಂತ್ರ ಇಂಡಿಯಾ ಲಿಮಿಟೆಡ್ (YIL), ಮುನಿಷನ್ಸ್ ಇಂಡಿಯಾ ಲಿಮಿಟೆಡ್ (MIL), ಆರ್ಮ್ಡ್ ವೆಹಿಕಲ್ಸ್ (ಶಸ್ತ್ರಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್ (AVANI), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWE India), ಇಂಡಿಯಾ ಆಪ್ಟೆಲ್ ಲಿಮಿಟೆಡ್ (IOL) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ (GIL).
‘ಭಾರತದ ರಕ್ಷಣಾ ವಲಯವನ್ನು ಆಧುನೀಕರಣಗೊಳಿಸಲು ಮತ್ತು ದೇಶದಲ್ಲಿ ಆತ್ಮನಿರ್ಭರ ಭಾರತ ಯೋಜನೆಯನ್ನು ಉತ್ತೇಜಿಸಲು ಈ 7 ರಕ್ಷಣಾ ಕಂಪನಿಗಳನ್ನು ದೇಶದ ಜನರಿಗೆ ಅರ್ಪಣೆ ಮಾಡಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.