ನವದೆಹಲಿ: ಟೀಮ್ ಇಂಡಿಯಾ ಇಂದು (ಜೂನ್ 27) ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಗಯಾನಾ ಮೈದಾನದಲ್ಲಿ ರೋಹಿತ್ ಸೇನೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ಆ ಸೋಲಿಗೆ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಕಾಯುತ್ತಿದೆ. ಈ ಸೆಮಿಫೈನಲ್ ಪಂದ್ಯವನ್ನು ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಹೋರಾಟಕ್ಕೆ ಸಜ್ಜಾಗಬೇಕಾದರೆ ನಾಯಕ ರೋಹಿತ್ ಶರ್ಮ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಸೆಮಿಸ್‌ನಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕೆ ಇಳಿಯುವ ಸಂಕಲ್ಪ ತೊಟ್ಟಂತಿದೆ. ಅದಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಆಕ್ರಮಣಕಾರಿ ಯುವ ಆಟಗಾರನನ್ನು ತಂಡಕ್ಕೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸದ್ಯ ತಂಡದಲ್ಲಿರುವ ಕಳಪೆ ಆಟಗಾರನೆಂದರೆ ಅದು ರವೀಂದ್ರ ಜಡೇಜಾ. ಈ ವಿಶ್ವಕಪ್ ಟೂರ್ನಿಯಲ್ಲಿ ಜಡೇಜಾ ತಂಡಕ್ಕೆ ಉಪಯುಕ್ತವಾಗಿಲ್ಲ. ಈ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ, ಒಂದು ಓವರ್ ಬೌಲ್ ಮಾಡಿ 7 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಡೇಜಾ ಡಕೌಟ್ ಆದರು. ಅಲ್ಲದೆ, ಎರಡು ಓವರ್ ಬೌಲ್ ಮಾಡಿದ ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಅಮೆರಿಕ ವಿರುದ್ಧದ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್‌ಗೆ ಬರಲಿಲ್ಲ ಮತ್ತು ಬೌಲಿಂಗ್ನಲ್ಲೂ ಕಮಾಲ್ ಮಾಡಲಿಲ್ಲ. ಹೀಗಾಗಿ ತಂಡದಲ್ಲಿ ಜಡೇಜಾ ನಿಷ್ಪ್ರಯೋಜಕರಾಗಿದ್ದಾರೆ. ತಂಡಕ್ಕೆ ಹೊರೆಯಾಗಿರುವ ಜಡೇಜಾ ಅವರನ್ನು ಹೊರತುಪಡಿಸಿ ಸಂಜು ಸ್ಯಾಮ್ಸನ್ ಅವರನ್ನು ರೋಹಿತ್ ತೆಗೆದುಕೊಳ್ಳಲು ಬಯಸಿದ್ದಾರೆ ಎಂದು ವರದಿಯಾಗಿದೆ.
ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ಗೆ ಹೋಲಿಕೆ ಮಾಡಿದರೆ ಜಡೇಜಾ ಕೊಂಚ ಹಿಂದುಳಿದಿದ್ದಾರೆ. ಜಡೇಜಾಗಿಂತ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ಗೆ ಹೆಚ್ಚು ಅವಕಾಶ ನೀಡಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಗಿದೆ.

