ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಸೀಸನ್ 10 ಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಈ ಬಾರಿಯ ಕಬಡ್ಡಿ ಕಾದಾಟ ಡಿಸೆಂಬರ್ 2, 2023 ರಿಂದ ಶುರುವಾಗಲಿದೆ. ಈ ಹಾಗೆಯೇ ಸೆಪ್ಟೆಂಬರ್ 8 ರಂದು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದು ಮಶಾಲ್ ಸ್ಪೋರ್ಟ್ಸ್ನ ಮುಖ್ಯಸ್ಥ ಮತ್ತು ಪ್ರೊ ಕಬಡ್ಡಿ ಲೀಗ್ನ ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ಗಾಗಿ ಸೆಪ್ಟೆಂಬರ್ 8 ಹಾಗೂ 9 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಬಿಡ್ಡಿಂಗ್ನಲ್ಲಿ 500 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ.
ಈ ಬಾರಿಯ ಟೂರ್ನಿಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರಲಿದೆ. ಈ ಹಿಂದೆ ಕೋವಿಡ್ ಭೀತಿ ಹಿನ್ನಲೆಯಲ್ಲಿ ನಿರ್ದಿಷ್ಟ ಸ್ಟೇಡಿಯಂಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ 12 ಫ್ರಾಂಚೈಸಿಗಳ ನಗರಗಳಲ್ಲಿ ಟೂರ್ನಿ ನಡೆಯಲಿದೆ. ಹೀಗಾಗಿ ತವರು ನಗರದಲ್ಲಿ ತಮ್ಮ ನೆಚ್ಚಿನ ತಾರೆಗಳನ್ನು ಹುರಿದುಂಬಿಸುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.