ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ಮಾರ್ಚ್ 26ರಂದು ಚಾಲನೆ ನೀಡಲು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಪ್ರದಾಯ ಪ್ರಕಾರದಂತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದ್ದು, ಮೊದಲ ಎದುರಾಳಿ ಯಾವ ತಂಡ ಎಂಬ ಕುತೂಹಲವಿದೆ.
ಬಿಸಿಸಿಐ ಮಾರ್ಚ್ 27ರಿಂದ ಟೂರ್ನಿ ಆರಂಭಿಸಲು ಯೋಜಿಸಿದ್ದರೂ, ಪ್ರಸಾರ ವಾಹಿನಿಯ ಮನವಿಯ ಮೇರೆಗೆ ಒಂದು ದಿನ ಮುಂಚಿತವಾಗಿಯೇ ಆರಂಭಿಸಲು ತೀರ್ಮಾನಿಸಿದೆ.
ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ.ಈ ಹಿಂದೆ ವರದಿಯಾದಂತೆ, ಮುಂಬೈನಲ್ಲಿ 55 ಮತ್ತು ಪುಣೆಯಲ್ಲಿ 15 ಲೀಗ್ ಪಂದ್ಯಗಳು ನಡೆಯಲಿವೆ. ಮುಂಬೈನ ವಾಂಖೆಡೆಯಲ್ಲಿ 20, ಬ್ರಬೋರ್ನ್ನಲ್ಲಿ 15 ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿವೆ.
ಈ ಬಾರಿ ಪ್ರೇಕ್ಷಕರಿಗೂ ಪ್ರವೇಶ ಕಲ್ಪಿಸಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದು, ಮಹಾರಾಷ್ಟ್ರ ಸರ್ಕಾರದ ಮಾರ್ಗಸೂಚಿಯಂತೆ ಸ್ಟೇಡಿಯಂಗೆ ಶೇ. 25ರಿಂದ 50 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದು ಎಂದಿದ್ದಾರೆ. ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಗೂ ಬಿಸಿಸಿಐ ಬಹುತೇಕ ನಿರ್ಧಾರ ಕೈಗೊಂಡಿದೆ.