Bengaluru 24°C
Ad

ಮಂಗಳೂರು ಬಜ್ಪೆ ವಿಮಾನ ದುರಂತದ ಕಹಿ ನೆನಪಿಗೆ ಇಂದಿಗೆ 14 ವರ್ಷ

Victims (1)

ಮಂಗಳೂರು: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಮೇ 22ಕ್ಕೆ 14 ವರ್ಷ ತುಂಬುತ್ತಿವೆ. 2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಕೆಂಜಾರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡ್ ಆಗುವ ಸಂದರ್ಭ ರನ್‌ವೇಯಿಂದ ಜಾರಿ ದುರಂತಕ್ಕೀಡಾಗಿತ್ತು.

ಅದರ ಪೈಲಟ್, 8 ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟು ಕರಕಲಾಗಿದ್ದರು. ಬೀಳುವ ವೇಳೆ ಇಬ್ಭಾಗಗೊಂಡಿದ್ದ ವಿಮಾನದಿಂದ 8 ಮಂದಿ ಜೀವದ ಹಂಗು ತೊರೆದು ನೆಲಕ್ಕೆ ಜಿಗಿದವರು ಬದುಕುಳಿದಿದ್ದಾರೆ. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ದುರಂತ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

ದುರಂತದಲ್ಲಿ ಮಡಿದವರ ಪೈಕಿ 22 ಮಂದಿಯ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಆ ಮೃತದೇಹಗಳ ಡಿಎನ್‌ಎ ಪರೀಕ್ಷೆ ಮಾಡಿಸಲಾಯಿತು. ಆದರೆ ಮೃತದೇಹ ಮತ್ತು ಕುಟುಂಬಸ್ಥರ ರಕ್ತಕ್ಕೆ ತಾಳೆಯಾಗದ ಕಾರಣ 12 ಮೃತದೇಹಗಳು ಅನಾಥವಾಗಿ ಉಳಿದಿತ್ತು.
ಈ ಸಂದರ್ಭದಲ್ಲಿ ಮೃತದೇಹಗಳನ್ನು ತಣ್ಣೀರು ಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು

ದ.ಕ. ಜಿಲ್ಲಾಡಳಿತವು ಅನಿವಾರ್ಯವಾಗಿ ಕೂಳೂರು-ತಣ್ಣೀರುಬಾವಿ ಬಳಿ ಸರ್ವಧರ್ಮದ ಶಾಸ್ತ್ರದ ಪ್ರಕಾರ ಅಂತಿಮ ಸಂಸ್ಕಾರ ಮಾಡಿಸಿತಲ್ಲದೆ ಅಲ್ಲೊಂದು ‘ವಿಮಾನ ದುರಂತ ಸ್ಮಾರಕ ಉದ್ಯಾನವನ’ ನಿರ್ಮಿಸಿತ್ತು. ಆರಂಭದಲ್ಲಿ ದುರಂತ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದ ಜಿಲ್ಲಾಡಳಿತ ಬಳಿಕ ಕೂಳೂರು-ತಣ್ಣೀರುಬಾವಿ ಸಮೀಪ ಶ್ರದ್ಧಾಂಜಲಿ ಸಭೆ ಆಯೋಜಿಸುತ್ತಾ ಬಂದಿವೆ.

ಪರಿಹಾರಕ್ಕಾಗಿ ಹೋರಾಟ: ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸುವುದಕ್ಕಾಗಿ ಕಂಪೆನಿಯು ಮುಂಬೈನ ಕಾನೂನು ತಜ್ಞ ಎಚ್‌.ಡಿ. ನಾನಾವತಿ ನೇತೃತ್ವದ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರು. ಪಡೆದವರೂ ಇದ್ದರು. ಆದರೆ ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ಇನ್ನೂ ಸುಮಾರು 45 ಕುಟುಂಬದವರು ಕಾನೂನು ಹೋರಾಟದಲ್ಲಿದ್ದಾರೆ. ಈ ನಡುವೆ ಏರ್‌ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಖರೀದಿಸಿದೆ.

 

 

Ad
Ad
Nk Channel Final 21 09 2023
Ad