Bengaluru 22°C
Ad

ಉತ್ತಮ ಮುಂಗಾರು: ಮೈಸೂರಿನ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ

ಕಳೆದ ಎರಡು ವಾರಗಳಿಂದ ಪೂರ್ವ ಮುಂಗಾರು ಆಶಾದಾಯಕವಾಗಿರುವ ಹಿನ್ನಲೆಯಲ್ಲಿ  ಎಚ್.ಡಿ.ಕೋಟೆ  ತಾಲೂಕಿನ  ಕಬಿನಿ  ಜಲಾಶಯಕ್ಕೆ ಎರಡು ದಿನಗಳಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. 

ಮೈಸೂರು: ಕಳೆದ ಎರಡು ವಾರಗಳಿಂದ ಪೂರ್ವ ಮುಂಗಾರು ಆಶಾದಾಯಕವಾಗಿರುವ ಹಿನ್ನಲೆಯಲ್ಲಿ  ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಎರಡು ದಿನಗಳಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದು ಖುಷಿ ತಂದಿದೆ.

ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಜಲಾಶಯದ ನೀರಿನ ಮಟ್ಟ ನೆಲಕಚ್ಚಿತ್ತು. ಹೀಗಾಗಿ ಹಿನ್ನೀರಿನಲ್ಲಿ ಪಳೆಯುಳಿಕೆ ಕಾಣಿಸಿದ್ದವು. ಹೀಗೆ ಆದರೆ ಮುಂದೇನು ಎಂಬ ಭಯದಲ್ಲಿಯೇ ಜನ ದಿನ ಕಳೆಯುವಂತಾಗಿತ್ತು. ಆದರೀಗ ಕೇರಳದ ವಯನಾಡು ಸೇರಿದಂತೆ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಇದೀಗ ಸುಮಾರು ಎರಡು ಅಡಿಯಷ್ಟು ನೀರಿನ ಮಟ್ಟ ಹೆಚ್ಚಾಗಿದೆ.

2,284 ಅಡಿ ಸಾಮರ್ಥ್ಯದ ಜಲಾಶಯ ಯಾವಾಗಲೂ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲೇ ಭರ್ತಿಯಾಗುತ್ತದೆ.  ಅತಿಹೆಚ್ಚು ಸಮಯ ಜೂನ್ ಅಂತ್ಯದಲ್ಲೇ ಭರ್ತಿಯಾಗಿ ಜುಲೈ ಆರಂಭದಲ್ಲೇ ಬಾಗಿನ ಸ್ವೀಕರಿಸಿದೆ. ಕಳೆದ ವರ್ಷ ಕೇರಳದ ವೈನಾಡು ಪ್ರಾಂತ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದೆ ನಿಗದಿತ ಸಮಯದಲ್ಲಿ ಡ್ಯಾಂ ಭರ್ತಿಯಾಗಲಿಲ್ಲ. ಆದರೂ, ಆಗಸ್ಟ್ ವೇಳೆಗೆ ಭರ್ತಿಯಾಗಿ ತಮಿಳುನಾಡಿಗೂ ನೀರು ಹರಿಸಲಾಗಿತ್ತು.

ಈ ಬಾರಿ ಮೇ ಮೂರನೇ ವಾರದಲ್ಲೇ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಎರಡು  ದಿನದಲ್ಲೇ ಜಲಾಶಯಕ್ಕೆ ಅರ್ಧ ಟಿಎಂಸಿ ನೀರು ಹರಿದು ಬಂದಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಜುಲೈ ಮೂರನೇ ವಾರದಲ್ಲೇ ಜಲಾಶಯ ಭರ್ತಿಯಾಗುವ ಆಶಾಭಾವ ಮೂಡಿದೆ.

ಮೇ 21 ರಂದು ಬೆಳಗ್ಗೆ 2256.96 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ ಮೇ 23ರ ಬೆಳಗ್ಗೆ ವೇಳೆಗೆ 2258.29 ಅಡಿಗಳಿಗೆ  ಏರಿಕೆಯಾಗಿದೆ.  ಜತೆಗೆ, ಮೇ 21 ರಂದು 841 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಗುರುವಾರ 4356 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ 300 ಕ್ಯೂಸೆಕ್ ಹೊರಹರಿವು ಇದೆ. 9.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 6.70 ಟಿಎಂಸಿ ನೀರು ಸಂಗ್ರಹವಾಗಿದೆ.

Ad
Ad
Nk Channel Final 21 09 2023
Ad