Bengaluru 22°C
Ad

ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಸಾಮೂಹಿಕವಾಗಿ ಬೀಗರೂಟಕ್ಕೆ ಹಾಜರಾದ ಅಧ್ಯಾಪಕರು

ಅಧ್ಯಾಪಕರು ಎಂದರೆ ಶಿಸ್ತು, ಸಂಯಮ, ಕಲಿಸುವ ಗುರುಗಳು, ಆದರೆ ಗುರುಗಳೇ ದಾರಿ ತಪ್ಪಿದರೆ  ವಿದ್ಯಾರ್ಥಿ ಸಮೂಹ ಏನಾಗಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾತಿ ಮಾಡಿಸಲು ಬಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣರಾಜಪೇಟೆ: ಅಧ್ಯಾಪಕರು ಎಂದರೆ ಶಿಸ್ತು, ಸಂಯಮ, ಕಲಿಸುವ ಗುರುಗಳು, ಆದರೆ ಗುರುಗಳೇ ದಾರಿ ತಪ್ಪಿದರೆ ವಿದ್ಯಾರ್ಥಿ ಸಮೂಹ ಏನಾಗಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾತಿ ಮಾಡಿಸಲು ಬಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ  ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಸಿ.ರಮೇಶ್ ಅವರ ಮಗಳ  ಮದುವೆಯ ಬೀಗರ ಔತಣ ಕೂಟಕ್ಕೆ ಕಾಲೇಜಿನ ಖಾಯಂ ಅಧ್ಯಾಪಕರು ಸಾಮೂಹಿಕವಾಗಿ ಸಹಿ ಮಾಡಿ ಬಸ್ಸಿನಲ್ಲಿ ರಾಮನಗರ ಜಿಲ್ಲೆಯ ಬಿಡದಿಗೆ ಬೀಗರೂಟಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಧ್ಯಾಪಕರುಗಳು ಯಾವುದೇ ರೀತಿಯ ರಜೆ ಅಥವಾ ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯದೇ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕರ್ತವ್ಯದ ವೇಳೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ  ನೂರಾರು ಕಿ.ಮೀ. ದೂರ ತೆರಳಿರುವುದು ಖಂಡನೀಯವಾದುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧ್ಯಾಪಕರ ಸಾಮೂಹಿಕ ಗೈರು ಹಾಜರಿಯ ಬಗ್ಗೆ ಕಛೇರಿಯ ವ್ಯವಸ್ಥಾಪಕರನ್ನು ಕೇಳಿದರೆ ನಮಗೆ ಈ ಬಗ್ಗೆ ಯಾವುದೇ  ಮಾಹಿತಿ ಗೊತ್ತಿಲ್ಲ, ಅಧ್ಯಾಪಕರು ಸಹಿ ಮಾಡಿದ್ದಾರೋ ಇಲ್ಲವೋ ನನ್ನ ಗಮನಕ್ಕೆ ಬರುವುದಿಲ್ಲ ಕಾಲೇಜಿನ ಆಡಳಿತ ವ್ಯವಹಾರವನ್ನೆಲ್ಲಾ ಪ್ರಾಂಶುಪಾಲರೇ ನಿರ್ವಹಿಸುತ್ತಾರೆ. ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಪ್ರಾಂಶುಪಾಲರು ಬಂದಾಗ ಅವರನ್ನೇ ಕೇಳಿ ಮಾಹಿತಿ ಪಡೆಯಿರಿ ಎಂದು ಕಾಲೇಜಿನ ವ್ಯವಸ್ಥಾಪಕಿ ಭುವನೇಶ್ವರಿ ತಿಳಿಸಿದ್ದಾರೆ.

ಅಧ್ಯಾಪಕರು ಕರ್ತವ್ಯ ಹಾಜರಿ ಪುಸ್ತಕಕ್ಕೆ ಸಾಮೂಹಿಕವಾಗಿ ಸಹಿ ಮಾಡಿ ಖಾಸಗಿ ಕಾರ್ಯಕ್ರಮಕ್ಕೆ ತೆರಳಿರುವ ಬಗ್ಗೆ  ಮೈಸೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನೀವು ನಮಗೆ ಲಿಖಿತವಾಗಿ ದೂರು ನೀಡಿದರೆ ಖಂಡಿತವಾಗಿಯೂ ಕ್ರಮವಹಿಸುತ್ತೇನೆ ಎಂದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ  ಕೆ.ಆರ್.ಪೇಟೆ ಕಾಲೇಜು ಶಿಕ್ಷಣಕಾಶಿ ಎಂದು ಹೆಸರು ಮಾಡಿದ್ದರೂ ಈ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅದ್ಯಾಪಕರುಗಳು ಇತ್ತೀಚೆಗೆ ಸರಿಯಾದ ಸಮಯಕ್ಕೆ ಬರದೇ ಬೇಕಾಬಿಟ್ಟಿಯಾಗಿ ಕಾಲೇಜಿಗೆ ಬರುವುದು ಮಧ್ಯಾಹ್ನಕ್ಕೆ ಹೊರಹೋಗುವುದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ ಆಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad