News Karnataka Kannada
Wednesday, May 08 2024
ಮೈಸೂರು

ಸರಗೂರು: ಜನರ ಗಮನ ಸೆಳೆದ ಚೊಚ್ಚಲ ಗ್ರಾಮೀಣ ದಸರಾ

Saragur: The first rural Dasara that caught the attention of the people
Photo Credit : By Author

ಸರಗೂರು: ನೂತನ ತಾಲೂಕು ಸರಗೂರಿನಲ್ಲಿ ಚೊಚ್ಚಲ ಗ್ರಾಮೀಣ ದಸರಾ ವಿಜೃಂಭಣೆಯಿಂದ ಬುಧವಾರ ನಡೆದಿದ್ದು, ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದರೆ ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ನೃತ್ಯಗಳಿಂದ ಕಾರ್ಯಕ್ರಮ ಕಳೆಗಟ್ಟಿತು. ಈ ಸುಂದರ ಕ್ಷಣಗಳಿಗೆ ಸಹಸ್ರಾರು ಮಂದಿ ಸಾಕ್ಷಿಯಾದರು.

ಪಟ್ಟಣದಲ್ಲಿರುವ ಮುಜರಾಯಿ ಇಲಾಖೆಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆರ್ಚಕ ಲಕ್ಷ್ಮಿನರಸಿಂಹನ್ ನೇತೃತ್ವದಲ್ಲಿ ಶಾಸಕ ಅನಿಲ್ ಚಿಕ್ಕಮಾಧು ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ 12.15ಕ್ಕೆ ಅಭಿಜಿತ್ ಮಹೂರ್ತದಲ್ಲಿ ಶಾಸಕ ಅನಿಲ್ ಚಿಕ್ಕಮಾಧು ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರಾಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅನಿಲ್ ಚಿಕ್ಕಮಾಧು ದೇವಿ ಚಾಮುಂಡೇಶ್ವರಿ ಅಮ್ಮನವರು ನಾಡಿನ ಜನತೆ ಒಳ್ಳೆಯದು ಮಾಡಲಿ. ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿ. ನಾಡು ಸಮೃದ್ಧಿಯಿಂದ ಕೂಡಿರಲಿ ಎಂದು ದೇವರಲ್ಲಿ ಪಾರ್ಥಿಸಿದರು.

ಆ ನಂತರ ಬೆಳ್ಳಿ ರಥದ ಪಲ್ಲಕ್ಕಿಯಲ್ಲಿ ಇಡಲಾಗಿದ್ದ ಚಾಮುಂಡೇಶ್ವರಿ ಅಮ್ಮನವರ ಭಾವಚಿತ್ರಕ್ಕೆ ಬಿಡಗಲು ಪಡುವಲು ವಿರಕ್ತಮಠದ ಮಹಾದೇವಸ್ವಾಮೀಜಿ ಅವರು ಪುಷ್ಪಾರ್ಚನೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮಕ್ಕಳಿಂದ ಕವಾಯತು, ಬ್ಯಾಂಡ್‌ ಸೆಟ್, ವೀರಗಾಸೆ ನೃತ್ಯ, ನಾದಸ್ವರ, ಚಂಡೆ, ನಾಗಾರಿ, ನಂದಿಧ್ವಜ, ಬುಡಕಟ್ಟು ಜನಾಂಗದವರ ವೀರ ಮಕ್ಕಳ ಕುಣಿತ, ಬಾಲಕಿಯರಿಂದ ವೀರರಾಣಿ ಕಿತ್ತೂರು ಚೆನ್ನಮ್ಮ, ಓನಕೆ ಒಬವ್ವರಂಥ ಹತ್ತು-ಹಲವು ಕಲಾ ಪ್ರಕಾರಗಳು ಹಾಗೂ ಆದಿ ಕರ್ನಾಟಕ ಮಹಾಸಭಾ ಸರಗೂರು ತಾಲೂಕು ಘಟಕದಿಂದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರ, ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಮನೆ ಮನೆಗೆ ನಲ್ಲಿ, ಪಟ್ಟಣ ಪಂಚಾಯಿತಿಯಿಂದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವ ಸಂದೇಶದ ಹೊತ್ತ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಮೊದಲನೇ ಮುಖ್ಯ ರಸ್ತೆಯ ಮುಖಾಂತರ ಎರಡನೇ ಮುಖ್ಯ ರಸ್ತೆಯ ಮೂಲಕ ಶ್ರೀಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.

ಬಿಡಗಲು ವಿರಕ್ತ ಮಠದ ಮಹಾದೇವಸ್ವಾಮೀಜಿ ಮಾತನಾಡಿ, ನೂತನ ತಾಲೂಕು ಸರಗೂರಿನಲ್ಲಿ ಇದೇ ಮೊದಲು ಗ್ರಾಮೀಣ ದಸರಾ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಇದರಿಂದ ಕಾಡಂಚಿನ ಪ್ರದೇಶದ ಜನತೆಗೆ ಒಳ್ಳೆಯದು ಆಗಲಿದೆ. ಜನಪ್ರತಿನಿಧಿಗಳು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಸಕ ಅನಿಲ್ ಚಿಕ್ಕಮಾಧು ಅಧ್ಯಕ್ಷತೆ ವಹಿಸಿದ್ದರು. ಬಿಡುಗಲು ಪಡುವಲು ವಿರಕ್ತಮಠದ ಶ್ರೀಮಹಾದೇವ ಸ್ವಾಮಿಗಳು, ತಾಲೂಕು ಪಂಚಾಯಿತಿಯ ನಿರ್ವಹಣಾಧಿಕಾರಿ ಕೆ ಸುಷ್ಮ, ಗ್ರೇಡ್ 2 ತಹಶೀಲ್ದಾರ್ ಪರಶಿವಮೂರ್ತಿ, ಶಿರಸ್ತೆದಾರ ಹರೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ, ಡಿಎಚ್ಒ ರವಿಕುಮಾರ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು