News Karnataka Kannada
Monday, May 06 2024
ಮೈಸೂರು

ಮೈಸೂರು: ಟಿಬೆಟ್ಟಿಯನ್ನರೊಂದಿಗೆ ಬೈಲುಕುಪ್ಪೆ ಶಿವಣ್ಣರ ಅಪೂರ್ವ ಬಾಂಧವ್ಯ

Mysore: Bylukuppe Shivanna's unique bond with Tibetans
Photo Credit : By Author

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಅಂಚಿನಲ್ಲಿ ಬೈಲುಕುಪ್ಪೆ ಗ್ರಾಮವಿದೆ. ಅಲ್ಲಿ ದೂರದ ಟಿಬೆಟ್ನಿಂದ ರಾಜ್ಯ ಭ್ರಷ್ಟರಾಗಿ ಬಂದು ವಾಸವಾಗಿರುವ ಜನರಿದ್ದಾರೆ. ಈ ಜನರೊಂದಿಗೆ ಸರಿಯಾದ ಸಂಪರ್ಕ ಸಾಧಿಸುವ ವ್ಯಕ್ತಿ ಅಂದ್ರೆ ಅದು ಬೈಲುಕುಪ್ಪೆ ಶಿವಣ್ಣ ಮಾತ್ರ. ನೀವು ಎಷ್ಟೇ ಬಾರಿ ಪರಿಚಯ ಮಾಡಿಕೊಂಡರೂ ಟಿಬೆಟ್ ಜನರನ್ನು ಮತ್ತೆ ಪತ್ತೆ ಹಚ್ಚುವುದು ಸಾಧ್ಯವೇ ಇಲ್ಲ. ಎಲ್ಲರೂ ಒಂದೇ ರೀತಿಯಲ್ಲಿ ಇರುವ ಟಿಬೆಟ್ಟಿಯನ್ನರ, ವೇಷಭೂಷಣವೂ ಒಂದೇ ಆಗಿರುತ್ತದೆ. ಹಾಗಾಗಿ ಇವರನ್ನು ಹೆಸರಿನಿಂದ ಗುರುತಿಸುವುದು ಕಷ್ಟದ ಕೆಲಸ. ಅದನ್ನು ಸುಲಭವಾಗಿಸಿ ಕೊಂಡವರು ಬೈಲುಕುಪ್ಪೆ ಶಿವಣ್ಣ. ಈಗಲೂ ಬೈಲುಕುಪ್ಪೆ ಟಿಬೆಟ್ ಕ್ಯಾಂಪ್ ನ ಪ್ರತಿಯೊಬ್ಬ ಟಿಬೆಟ್ಟರೂ ಶಿವಣ್ಣ ಅವರನ್ನು ಮಾತನಾಡಿಸುತ್ತಾರೆ ಮತ್ತು ಶಿವಣ್ಣ ಕೂಡ ಅವರನ್ನ ಹೆಸರಿಡಿದು ಮಾತನಾಡುವಷ್ಟು ಪರಿಚಿತರು.

ಟಿಬೆಟ್ಟರ ಆಚಾರ ವಿಚಾರಗಳು, ಅವರ ನಡೆ-ನುಡಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇವರಿಗಿದೆ. ತಮ್ಮವರಲ್ಲದ ಯಾರನ್ನಾದರೂ ಈ ಟಿಬೆಟ್ಟರು ನಂಬುತ್ತಾರೆ ಎಂದರೆ ಅದು ಶಿವಣ್ಣ ಮಾತ್ರ. ಅದು ಒಂದೇ ದಿನದಲ್ಲಿ ಪಡೆದ ಸಂಪರ್ಕವಲ್ಲ. ಯಾವುದೋ ದೇಶದಿಂದ ಬಂದವರು ಸ್ಥಳೀಯರನ್ನು ನಂಬಿ ವ್ಯವಹಾರ ಮಾಡಬೇಕಾದರೆ ಅದಕ್ಕೆ ಹಲವಾರು ವರ್ಷಗಳ ವಿಶ್ವಾಸಾರ್ಹತೆ ಇರಬೇಕಾಗುತ್ತದೆ. ಎಲ್ಲವನ್ನೂ ಪರೀಕ್ಷೆ ಮಾಡಿಯೇ ಆ ಜನ ಹೊರಗಿನವರನ್ನು ನಂಬುತ್ತಾರೆ. ಅದು ಶಿವಣ್ಣ ಅವರಿಗೆ ದಕ್ಕಿದೆ. ಯಾರೋ ಎಲ್ಲೋ ಕೂತು ತೆಗೆದುಕೊಳ್ಳುವ ನಿರ್ಧಾರಗಳು ಯಾರದೋ ಬದುಕನ್ನು ಬದಲಿಸಿ ಬಿಡುತ್ತವೆ.

ಅಂದು ೧೯೯೯ರಲ್ಲಿ ಲಾಜಿಸ್ಟಿಕ್ ಸಂಸ್ಥೆ ನಡೆಸುತ್ತಿದ್ದ ವಿಜಯಸಂಕೇಶ್ವರ ಎಂಬ ಮಹಾನ್ ಕನಸುಗಾರ ಒಂದು ಪತ್ರಿಕೆ ಆರಂಭಿಸುವ ಮಹತ್ವಾಕಾಂಕ್ಷೆಯಿಂದ ರಾಜ್ಯದಲ್ಲಿ ಹೊಸ ಶಕೆಯನ್ನೇ ಹುಟ್ಟಿಹಾಕಿದರು. ಆಗ ಆರಂಭಗೊಂಡ ವಿಜಯ ಕರ್ನಾಟಕ ಎಂಬ ಪತ್ರಿಕೆ ಬೈಲುಕುಪ್ಪೆಯಲ್ಲಿ ರೈತಾಪಿಯಾಗಿ ಕೆಲಸ ಮಾಡುತ್ತಿದ್ದ ಶಿವಣ್ಣನನ್ನು ಪತ್ರಕರ್ತ ಮತ್ತು ಪತ್ರಿಕಾ ಏಜೆಂಟರನ್ನಾಗಿ ಮಾಡಿಬಿಟ್ಟಿತು. ಈಗಲೂ ಬೈಲುಕುಪ್ಪೆಯಲ್ಲಿ ಅವರು ಪೇಪರ್ ಶಿವಣ್ಣ ಅಂತಲೇ ವರ್ಲ್ಡ್ ಫೇಮಸ್. ಹಾಗೆ ಆಗ ಪತ್ರಿಕೆಯ ಏಜೆಂಟರಾಗಿ, ಸ್ಥಳೀಯ ಸುದ್ದಿಗಳನ್ನು ಕಳುಹಿಸುತ್ತಿದ್ದ ಶಿವಣ್ಣ ಅವರಿಗೆ ಟಿಬೆಟ್ಟರ ಸಂಪರ್ಕ ಬರ ತೊಡಗಿತು.

ಟೈಮ್ಸ್ ಆಫ್ ಇಂಡಿಯಾ ಪೇಪರ್ ನ್ನು ತರಿಸಿ ಕ್ಯಾಪ್ ನಲ್ಲಿ ಹಂಚುತ್ತಿದ್ದರು. ಯಾವುದೋ ಒಂದು ಸಂದರ್ಭದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ ಭಾವಚಿತ್ರವಿದ್ದ ಪತ್ರಿಕೆಯನ್ನು ಪೇಪರ್ ಹಾಕುವ ಹುಡುಗ ಮೋರಿಗೆ ಬೀಳುವಂತೆ ಮಾಡಿದ್ದ, ಅದಕ್ಕೆ ಟಿಬೆಟ್ಟಿಯನ್ನರು ತುಂಬಾ ನೊಂದುಕೊಂಡು ಪತ್ರಿಕೆ ಹಾಕಿಸುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಕೊನೆಗೆ ಶಿವಣ್ಣ ಅವರು ವೈಯಕ್ತಿಕ ಸಂಬಂಧದ ಕಾರಣಕ್ಕಾಗಿ ಮತ್ತೆ ಪತ್ರಿಕೆ ಬರುವಂತಾಯಿತು. ನಂತರ ವಿಜಯಕರ್ನಾಟಕ ಸಂಸ್ಥೆಯಿಂದಲೇ ಆರಂಭವಾದ ವಿಜಯ ಟೈಮ್ಸ್ ಪತ್ರಿಕೆಯನ್ನೂ ಶಿವಣ್ಣ ಅವರೇ ಬೈಲುಕುಪ್ಪೆಯಲ್ಲಿ ಏಜೆಂಟರಾಗಿ ಸೇವೆ ಸಲ್ಲಿಸಿದ್ದರು.

ಹೀಗೆ ಪತ್ರಿಕಾ ಸಂಪರ್ಕಕ್ಕೆ ಬಂದ ಶಿವಣ್ಣ ಯಾವುದೇ ಪತ್ರಿಕಾ ಪ್ರತಿನಿಧಿಯಿಂದ ಒಂದೇ ಒಂದು ಮಾತು ಕೇಳಿಸಿಕೊಂಡವರಲ್ಲ. ನಿಗದಿ ಪಡಿಸಿದ ದಿನಕ್ಕೆ ನಿಗದಿ ಪಡಿಸಿದಷ್ಟ ಹಣವನ್ನು ಸಂದಾಯ ಮಾಡುತ್ತಾರೆ. ಜಾಹೀರಾತು ತಂದರೂ ಅಷ್ಟೇ ಪ್ರಾಮಾಣಿಕವಾಗಿ ಹಣ ಪಾವತಿಸುತ್ತಾರೆ.

ಮೈಸೂರಿನ ಬಹುಪಾಲು ಪತ್ರಿಕಾ ಕಚೇರಿಗಳಲ್ಲಿ ಗೌರವ ಸಂಪಾದಿಸಿರುವ ಶಿವಣ್ಣ ತಮ್ಮ ಗೌರವಕ್ಕೆ ಕೊಂಚ ಧಕ್ಕೆಯಾದರೂ ಅದನ್ನು ಸಹಿಸಿಕೊಳ್ಳುವುದಿಲ್ಲ. ಅಂತಹ ವಿಷಯ ಬಂದಾಗ ತಕ್ಷಣ ಪ್ರತಿಕ್ರಿಯಿಸುತ್ತಾರೆ ಮತ್ತು ಅಂತಹವರ ಸಂಪರ್ಕವನ್ನು ಬಯಸುವುದಿಲ್ಲ. ಅಷ್ಟು ಖಡಕ್ ಆಸಾಮಿಯಾಗಿರುವ ಕಾರಣದಿಂದಲೇ ಟಿಬೆಟ್ಟಿಯನ್ನುರಿಗೆ ಇವರನ್ನು ಕಂಡರೆ ತುಂಬಾ ಇಷ್ಟ. ಕನ್ನಡದ ಪತ್ರಿಕೆಗಳಿಗಿಂದ ಶಿವಣ್ಣ ಅವರಿಗೆ ಟಿಬೆಟ್ ಕ್ಯಾಂಪ್ ನಲ್ಲಿ ಹೆಸರು ಮತ್ತು ಹಣ ಕೊಟ್ಟಿದ್ದು ʼಟೆಬೆಟ್ ವರ್ಲ್ಡ್ ಬುಕ್ʼ ಎಂಬ ಮಾಸಿಕ ಪತ್ರಿಕೆ. ಈ ಪತ್ರಿಕೆಯನ್ನು ಪ್ರತಿಯೊಬ್ಬ ಟಿಬೆಟ್ಟನೂ ಇಂದಿಗೂ ಕೊಳ್ಳುತ್ತಾನೆ. ಗೌರವದಿಂದ ಇದರ ಹಣ ಸಂದಾಯ ಮಾಡುತ್ತಾನೆ. ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಪ್ರಕಟಗೊಳ್ಳುವ ಟಿಬೆಟ್ ವರ್ಲ್ಟ್ ಬುಕ್ ನ್ನು ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪದಲ್ಲಿ ಏಜೆನ್ಸಿ ತೆಗೆದುಕೊಂಡು ಮಾರುವ ಈ ಕನ್ನಡಿಗನ ಬಗ್ಗೆ ಟಿಬೆಟ್ ಜನರಿಗೆ ಬಹಳ ಪ್ರೀತಿ.

ಪತ್ರಿಕಾ ವೃತ್ತಿಯನ್ನು ಮಾಡಿಕೊಂಡೇ ಎರಡು ಗಂಡು ಮಕ್ಕಳಿಗೆ ಬದುಕಿನ ದಾರಿ ತೋರಿರುವ ಶಿವಣ್ಣ ಅವರು ಪತ್ರಿಕಾ ವೃತ್ತಿಗಿಂತ ಹೆಚ್ಚಿನ ಗೌರವವನ್ನು ಬಯಸಿಲ್ಲ. ಈಗಲೂ ಬೆಳಗಿನ ಜಾವದಲ್ಲಿ ಎದ್ದು ಬೈಕ್ ಗೆ ಪತ್ರಿಕೆ ಕಟ್ಟಿಕೊಂಡು ಸುತ್ತಾಡಿ ಬರುವುದು ಅವರ ದೈನಂದಿನ ಹವ್ಯಾಸ. ಹಣ ಇಲ್ಲದ ಸಮಯದಲ್ಲಿ ಹೇಗಿದ್ದರೋ ಅದೇ ವಿಶ್ವಾಸ, ಆತ್ಮೀಯತೆಯಿಂದಲೇ ಎಲ್ಲರನ್ನೂ ಮಾತನಾಡಿಸುತ್ತಾರೆ. ಯಾರೊಂದಿಗೂ ವಿಶ್ವಾಸ ಕೆಡಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ವ್ಯವಹಾರಿಕವಾಗಿಯೂ ಖಡಕ್. ಇಂತಹ ಶಿವಣ್ಣ ಅವರನ್ನು ಇಷ್ಟಪಡದೇ ಇರಲು ಕಾರಣವೇ ಇಲ್ಲ.

ಮಕ್ಕಳು ಬೆಳೆದು ದುಡಿಯುತ್ತಿದ್ದರೂ, ತಾನು ಸಂಪಾದನೆ ಮಾಡಿದ್ದರೂ ತನ್ನ ವೃತ್ತಿಯ ಬಗ್ಗೆ ಒಂದು ದಿನವೂ ತಾತ್ಸಾರ ತೋರುವ ಜಾಯಮಾನವಲ್ಲ ಇವರದು. ಅದಕ್ಕಾಗಿಯೇ ಶಿವಣ್ಣ ಎಲ್ಲರಿಗೂ ಮಾದರಿಯಾಗುತ್ತಾರೆ. ತನಗೆ ಶಕ್ತಿ ಇರುವವರೆಗೆ ಪತ್ರಿಕೆ ಕೆಲಸವನ್ನು ನಿಲ್ಲಿಸುವುದಿಲ್ಲ ಎಂಬ ದೀಕ್ಷೆ ತೆಗೆದುಕೊಂಡವರಂತೆ ಇಂದಿಗೂ ಕೆಲಸ ಮಾಡುವ ಇವರು ಮೈಸೂರು ಭಾಗದ ಎಲ್ಲ ಪತ್ರಿಕೆಗಳ ಸಂಪಾದಕರು, ಪ್ರಸಾರಾಂಗ ಪ್ರತಿನಿಧಿಗಳಿಗೆ ಚಿರಪರಿಚಿತರು. ಇಂತಹ ಶಿವಣ್ಣ ಎಲ್ಲರೊಂದಿಗೆ ನೂರ್ಕಾಲ ಬಾಳಲಿ ಎಂದು ಹಾರೈಸೋಣ.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಶಿವಣ್ಣ, ಹಿಮಾಚಲ ಪ್ರದೇಶದಲ್ಲಿ ರಾಜ್ಯ ಭ್ರಷ್ಟರ ಪಟ್ಟಿಗೆ ಸೇರಿದ ಆಚಾರ ವಿಚಾರದಲ್ಲಿ ವಿಭಿನ್ನವಾಗಿರುವ ವ್ಯಕ್ತಿಗಳ ಮನಸ್ಸನ್ನು ಗೆದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದರ ನನ್ನ ಸೌಭಾಗ್ಯ. ಈ ಸಂಪರ್ಕವನ್ನು ಬೆಳೆಸಲು ವರ್ಷಗಟ್ಟಲೆ ಹರ ಸಾಹಸ ಪಡಬೇಕಾಯಿತು. ಅದೇ ಸಮಯದಲ್ಲಿ ಪತ್ರಿಕೆಗಳು ನನ್ನ ಕೆಲಸಕ್ಕೆ ಸಾಥ್ ನೀಡಿದ್ದರಿಂದ ಅವರಿಗೆ ಇನ್ನಷ್ಟು ಹತ್ತಿರವಾಗಲು ಸಹಾಯವಾಯಿತು ಹಾಗೂ ಇದರಿಂದ ನನ್ನನ್ನು ಪೇಪರ್ ಶಿವಣ್ಣ ಎಂದು ಕರೆಯಲು ಶುರು ಮಾಡಿದರು. ನನ್ನ ಮತ್ತು ಆ ಜನಾಂಗದವರ ಒಡನಾಟಕ್ಕೆ ಯಾವುದೇ ದೋಷ ಬಾರದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

-ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು