ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು ಈ ವೇಳೆ ಔಷಧಿಗಳಿಗೆ ಹೊರಗೆ ಚೀಟಿ ಬರೆದು ಕೊಡುವುದು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ಔಷಧಿಗಳಿಗೆ ಹೊರಗೆ ಬರೆದು ಕೊಡದಂತೆ ವೈದ್ಯರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಛತೆ ಕಾಪಾಡಿ ಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ವಿಕಲ ಚೇತನರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ನಂತರ ಐಸಿಯು ವಾರ್ಡ್ಗೆ ಭೇಟಿ ನೀಡಿ ರೋಗಿಗಳ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡರು. ನಂತರ ಹೆರಿಗೆ ವಾರ್ಡ್ಗೆ ಭೇಟಿ ನೀಡಿ ತಾಯಿ ಮಗುವಿನ ಆರೋಗ್ಯ ವಿಚಾರಿಸಿದರು. ನಾರ್ಮಲ್ ಹೆರಿಗೆಗಳನ್ನು ಮಾಡಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸಿಜೇರಿಯನ್ ಮಾಡಬೇಕು ಎಂದು ಸೂಚಿಸಿದ ಅವರು, ಔಷಧಿಗಳಿಗೆ ಹೊರಗೆ ಚೀಟಿ ಬರೆದು ನೀಡಬಾರದು. ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ನಂತರ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಂದ ಆಸ್ಪತ್ರೆ ಕುರಿತು ಮಾಹಿತಿ ಪಡೆದುಕೊಂಡರು. ತಾಲೂಕು ಆಸ್ಪತ್ರೆಯವರು ರೋಗಿಗಳಿಗೆ ಹೆಚ್ಚಾಗಿ ಕೆ.ಆರ್.ಆಸ್ಪತ್ರೆಗೆ ರೆಫರ್ ಮಾಡುತ್ತಿದ್ದು, ಇದರ ಬದಲು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಬೇಕು. ಇದರಿಂದ ಕೆ.ಆರ್.ಆಸ್ಪತ್ರೆಯ ಒತ್ತಡ ಕಡಿಮೆ ಮಾಡುವ ಜತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ರಂದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಸಾದ್ ಹಾಗೂ ವೈದ್ಯಾಧಿಕಾರಿಗಳು ಉಪಸ್ಧಿತರಿದ್ದರು.