News Karnataka Kannada
Monday, May 06 2024
ಮೈಸೂರು

ಮೈಸೂರು: ಅಂಕಗಳಿಕೆಯೇ ವಿದ್ಯಾರ್ಥಿಗಳ ಅಂತಿಮ ಗುರಿಯಾಗಬಾರದು- ಟಿ. ಸತೀಶ್ ಜವರೇಗೌಡ

Mysore/Mysuru: Scoring marks should not be the ultimate goal of students. Satish Javaregowda
Photo Credit : By Author

ಮೈಸೂರು: ಪಠ್ಯ ವಿಷಯಗಳ ಓದು ಮತ್ತು ಅಂಕ ಗಳಿಕೆಯೇ ವಿದ್ಯಾರ್ಥಿಗಳ ಅಂತಿಮ ಗುರಿಯಾಗಬಾರದು. ಇದರ ಜೊತೆ ಜೊತೆಗೆ ಕ್ರೀಡಾ, ಸಾಂಸ್ಕೃತಿಕ ಮತ್ತು ಸಾಹಿತ್ಯಾತ್ಮಕ ವಿಷಯಗಳ ಬಗ್ಗೆ ಆಸಕ್ತಿ ಬೆಳಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.

ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯ ವತಿಯಿಂದ ಆಯೋಜಿಸಲಾಗಿದ್ದ ಮೆಲ್ಲಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಹ ಪಠ್ಯ ಚಟುವಟಿಕೆಗಳ ಕುರಿತು ಒಲವು ಮೂಡಿಸುವ ಕೆಲಸವನ್ನು ಶಿಕ್ಷಕರೆಲ್ಲ ಬದ್ಧತೆಯಿಂದ ಮಾಡಬೇಕು ಎಂದರು.

ಇಂದು ವಿದ್ಯಾರ್ಥಿಗಳು ಪಠ್ಯ ವಿಷಯಗಳ ಓದಿನ ಒತ್ತಡದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳತ್ತ ಅವರ ಮನಸ್ಸು ವಾಲುತ್ತಿಲ್ಲ. ಶಾಲೆಯ ಆಚೆಗಿನ ಜ್ಞಾನ ಲಭಿಸುತ್ತಿಲ್ಲ. ಆದ್ದರಿಂದ, ಶಿಕ್ಷಕ ಸಮುದಾಯ, ಪೋಷಕ ವರ್ಗ ಮಕ್ಕಳಿಗೆ ಪ್ರೇರಣೆ, ಉತ್ತೇಜನ ನೀಡಿ ಕಲಾ ವಿಚಾರಗಳಲ್ಲಿ ಆಸಕ್ತಿ ಮೂಡುವಂತಹ ವಾತಾವರಣ ಕಲ್ಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾಂತ ಮಾತನಾಡಿ, ನಾವು ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇರಲಿಲ್ಲ. ಆದರೆ, ಇಂದು ವಿದ್ಯಾರ್ಥಿಗಳ ಪ್ರತಿಭೆಯ ಹೊರತೆಗೆಯಲು ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯುತ್ತಿವೆ ಇದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ಆಲೋಚಿಸದೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.

ವಿಶೇಷ ಚೇತನರ ಸಂಪನ್ಮೂಲ ಶಿಕ್ಷಕ ಸಿದ್ದಲಿಂಗಯ್ಯ ಮಾತನಾಡಿ, ಕೊರೋನ ಕಾರಣದಿಂದ ಎರಡು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆಗಳು ಜರುಗಿರಲಿಲ್ಲ. ಈ ವರ್ಷ ಎಲ್ಲಾ ಸಹಪಠ್ಯ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಜೊತೆಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.

ವೇದಿಕೆಯಲ್ಲಿ ಮೆಲ್ಲಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪಿ.ಕೆ. ದೀಪು, ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ. ಪುಷ್ಪಲತಾ, ತಾಲೂಕು ಪ್ರಾ.ಶಾ.ಶಿ. ಸಂಘದ ವರುಣ ಹೋಬಳಿ ಕಾರ್ಯದರ್ಶಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆ, ಗಾಯನ, ಲಘು ಸಂಗೀತ, ಭಾಷಣ, ಆಶುಭಾಷಣ, ವೇಷಭೂಷಣ, ಪದ್ಯ ಕಂಠಪಾಠ, ಕ್ಲೇ ಮಾಡೆಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು