News Karnataka Kannada
Monday, April 29 2024
ಮೈಸೂರು

ಕಾಫಿ ಎಲೆಯಿಂದ ಪಾನೀಯ: ಮುಂದಿನ ತಿಂಗಳಿನಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜು

Leaves
Photo Credit :

ಮೈಸೂರು, ಮೇ.16: ನೂತನ ಅವಿಷ್ಕಾರದ ಮೂಲಕ ಕಾಫಿ ಎಲೆಗಳಿಂದ ಪಾನೀಯವನ್ನು ಸಂಶೋದನೆ ಮಾಡಿದ ಬೆನ್ನಲ್ಲೇ ಇದರ ತಂತ್ರಜ್ಞಾನ ಪಡೆದುಕೊಳ್ಳಲು ಅನೇಕ ಸಂಘ ಸಂಸ್ಥೆಗಳು ಮುಂದಾಗಿದ್ದು ಶೀಘ್ರದಲ್ಲಿ ಈ ಪಾನೀಯವು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯದ ಹಿರಿಯ ವಿಜ್ಞಾನಿ ಶ್ರೀ ಮತಿ ಪುಷ್ಪಾ ಅವರ ನೇತೃತ್ವದ ವಿಜ್ಞಾನಿಗಳ ತಂಡ ಕಳೆದ ಫೆಬ್ರುವರಿ ತಿಂಗಳಿನಲ್ಲೇ ಕಾಫಿ ಎಲೆ ಪಾನೀಯವನ್ನು ಅಭಿವೃದ್ದಿಪಡಿಸಿತ್ತು. ಈ ನೂತನ ಸಂಶೋಧನೆ ಕಾಫಿ ಉದ್ಯಮದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಏಕೆಂದರೆ ಈವರೆಗೆ ಕಾಫಿ ಎಲೆಗಳಿಗೆ ಯಾವುದೇ ಮೌಲ್ಯ ಇಲ್ಲದೆ ತೋಟಗಳಲ್ಲಿ ಗೊಬ್ಬರವಾಗಿ ಮಾತ್ರ ಬಳಕೆ ಆಗುತಿತ್ತು.

ಈ ಕುರಿತು ಮಾಹಿತಿ ನೀಡಿದ ಆಹಾರ ಸಂಶೋಧನಾಲಯದ ತಂತ್ರಜ್ಞಾನ ವರ್ಗಾವಣೆ ವಿಭಾಗದ (technology transfer department) ಅಧಿಕಾರಿಗಳು ನೆರೆಯ ಕೇರಳ, ತಮಿಳುನಾಡು ಮಾತ್ರವಲ್ಲದೆ ವಿದೇಶದಿಂದಲೂ ಈ ನೂತನ ಪಾನೀಯಕ್ಕೆ ವಿಚಾರಣೆ ಬರುತ್ತಿದೆ ಎಂದರು. ಆಲ್ಲದೆ ಅನೇಕ ಸ್ವಸಹಾಯ ಗುಂಪುಗಳು , ಸ್ತ್ರೀ ಶಕ್ತಿ ಸಂಘಗಳು ಕೂಡ ಈ ತಂತ್ರಜ್ಞಾನ ಖರೀದಿಗೆ ಆಸಕ್ತಿ ತೋರಿವೆ ಎಂದು ತಿಳಿಸಿದ ಅವರು ಈ ತಂತ್ರಜ್ಞಾನದ ವರ್ಗಾವಣೆಗೆ ಸಂಸ್ಥೆಯು ಒಂದು ಲಕ್ಷ ರೂಪಾಯಿಗಳ ದರ ನಿಗದಿ ಮಾಡಿದ್ದು ಕುಶಾಲನಗರ ಮೂಲದ ಎಸ್‌ಎಲ್‌ಎನ್‌ ಕಾಫಿ ಕಂಪೆನಿಯು ಈಗಾಗಲೇ ತಂತ್ರಜ್ಞಾನವನ್ನು ಖರೀದಿಸಿದೆ ಎಂದು ತಿಳಿಸಿದರು.

ಈ ಕುರಿತು ಎಸ್‌ಎಲ್‌ಎನ್‌ ಕಾಫಿ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಎಸ್‌ ಎಲ್‌ ಸಾತಪ್ಪನ್‌ ಅವರನ್ನು ಸಂಪರ್ಕಿಸಿದಾಗ ಕಂಪೆನಿಯು ಈ ತಂತ್ರಜ್ಞಾನವನ್ನು ಖರೀದಿಸಿರುವದನ್ನು ಧೃಢಪಡಿಸಿದರಲ್ಲದೆ ಮುಂದಿನ ತಿಂಗಳಿನ ಒಳಗೆ ಎಲೆ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಮೊದಲಿಗೆ ಈ ಪಾನೀಯವನ್ನು ಟೀ ಬ್ಯಾಗ್‌ ಗಳ ಮಾದರಿಯಲ್ಲಿಯೇ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ (ಒಂದು ಕಪ್‌ ಪಾನೀಯ ಕ್ಕೆ ಸೂಕ್ತವಾಗುವಂತೆ ) ಬಿಡುಗಡೆ ಮಾಡಲು ಸಿದ್ದತೆ ನಡೆದಿದ್ದು ಈ ಪಾನೀಯವು ಮಾನವ ಆರೋಗ್ಯಕ್ಕೆ ಪುಷ್ಟಿ ನೀಡುವ ಹಿನ್ನೆಲೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ ಎಂದರು.

ಕಾಫಿ ಎಲೆಯ ಪಾನೀಯವು ಕಾಫಿಯ ರುಚಿಗಿಂತ ಭಿನ್ನವಾಗಿದ್ದು ಇದನ್ನು ಮೊದಲಿಗೆ ಗ್ರಾಹಕರಿಗೆ ಪರಿಚಯಿಸಿ ನಂತರ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು ಎಂದು ಅವರು ಹೇಳಿದರು. ದೇಶದಲ್ಲೇ ಈ ಪಾನೀಯ ಬಿಡುಗಡೆ ಮಾಡುತ್ತಿರುವ ಮೊದಲ ಸಂಸ್ಥೆ ಇದಾಗಿದ್ದು ಮೊದಲಿಗೆ ಈ ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌ , ಫ್ಲಿಪ್‌ ಕಾರ್ಟ್‌ ನ ಮೂಲಕ ಗ್ರಾಹಕರಿಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು ಮುಂದಿನ ತಿಂಗಳಿನಲ್ಲಿ ಗ್ರಾಹಕರಿಗೆ ಉಚಿತ ಸ್ಯಾಂಪಲ್‌ಗಳನ್ನು ವಿತರಿಸಲಾಗುವುದು ಎಂದೂ ಅವರು ತಿಳಿಸಿದರು.

ಕಾಫಿ ಎಲೆಯ ಪಾನೀಯ ಜನಪ್ರಿಯವಾದಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಮತ್ತಷ್ಟು ಆದಾಯ ಲಭಿಸಲಿದ್ದು ಕಾಫಿ ಕೃಷಿ ಲಾಭದಾಯಕ ಆಗಲಿದೆ. ಅಲ್ಲದೆ ಇದರಿಂದ ದೇಶದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿ ಆಗಲಿವೆ. ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೂಲಿ ಸೇರಿದಂತೆ ಕಾಫಿಯ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆ ಆಗಿದ್ದು ರೋಗದ ಕಾಟವೂ ಹೆಚ್ಚಾಗಿರುವುದರಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ನೂತನ ತಂತ್ರಜ್ಞಾನದ ಬಳಕೆಯಿಂದ ಬೆಳೆಗಾರರ ಆದಾಯ ಹೆಚ್ಚುವ ಜತೆಗೇ ಗ್ರಾಹಕರಿಗೂ ಕಡಿಮೆ ದರದಲ್ಲಿ ಪಾನೀಯವೊಂದು ದೊರಕಲಿದ್ದು ಇಬ್ಬರಿಗೂ ಅನುಕೂಲವಾಗಲಿದೆ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಈ ಪಾನೀಯ ಗ್ರಾಹಕರ ಮನಗೆದ್ದರೆ ಕಾಫಿ ಉದ್ಯಮದಲ್ಲಿ ಹೊಸತೊಂದು ಶಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು