News Karnataka Kannada
Saturday, May 04 2024
ಶಿವಮೊಗ್ಗ

ಮುಂಗಾರು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಿ: ಡಾ.ಸೆಲ್ವಮಣಿ

Salvamani
Photo Credit : News Kannada

ಶಿವಮೊಗ್ಗ, ಮೇ.16: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಅಪಾಯಗಳನ್ನು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಮುಂಗಾರು ಎದುರಿಸಲು ಕೈಗೊಳ್ಳುವ ಕ್ರಮಗಳ ಕುರಿತು ಕಾರ್ಯ ಯೋಜನೆಯನ್ನು ವಾರದ ಒಳಗಾಗಿ ಸಲ್ಲಿಸುವಂತೆ ಅವರು ತಿಳಿಸಿದರು.

ನಗರ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಮೊದಲೇ ಗುರುತಿಸಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆಯಬಹುದಾದ ಸ್ಥಳಗಳನ್ನು ಗುರುತಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕು. ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರು ನೆರವಿಗಾಗಿ ಸಂಪರ್ಕ ಮಾಡಲು 24×7 ಸಹಾಯಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಬೇಕು. ಪರಿಹಾರ ಕಾರ್ಯಗಳನ್ನು ನಡೆಸಲು ಕಾರ್ಯಪಡೆಯನ್ನು ರಚಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ಕಾರ್ಯಪಡೆಯಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪ್ರತಿನಿಧಿಗಳು ಇರಬೇಕು ಎಂದು ಹೇಳಿದರು.

ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ನಿರಂತರವಾಗಿ ಅಧಿಕಾರಿಗಳ ನಡುವೆ ಹಂಚಿಕೊಳ್ಳಬೇಕು. ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವ ಸಾಕಷ್ಟು ಪೂರ್ವದಲ್ಲಿ ಮಾಹಿತಿಯನ್ನು ಒದಗಿಸಬೇಕು. ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಸದಾ ಸನ್ನದ್ಧವಾಗಿರಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಗಾಳಿ ಮಳೆಯಿಂದ ಮರ, ವಿದ್ಯುತ್ ಕಂಬಗಳು ಬಿದ್ದ ತಕ್ಷಣ ಅವುಗಳನ್ನು ತೆರವುಗೊಳಿಸಲು ಎಲ್ಲಾ ತಾಲೂಕುಗಳಲ್ಲಿ ತಂಡಗಳನ್ನು ರಚಿಸಬೇಕು. ಜೆಸಿಬಿ ಸೇರಿದಂತೆ ಅಗತ್ಯ ಸೌಲಭ್ಯಗಳು ಎಲ್ಲಾ ಕಡೆ ಸಿದ್ಧವಿರಬೇಕು. ಮಳೆಯಿಂದಾಗಿ ಗುಡ್ಡ ಕುಸಿಯಬಹುದಾದ ಸ್ಥಳಗಳು, ಘಾಟಿ ಪ್ರದೇಶದಲ್ಲಿ ರಸ್ತೆ ಕುಸಿಯಬಹುದಾದ ಸ್ಥಳಗಳನ್ನು ಈಗಲೇ ಗುರುತಿಸಬೇಕು. ಅಂತಹ ಸಂದರ್ಭದಲ್ಲಿ ತಕ್ಷಣ ಸಂಚಾರ ವ್ಯವಸ್ಥೆಯನ್ನು ಪುನಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್‍ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ವಿದ್ಯುತ್ ಸಂಪರ್ಕವನ್ನು ಆದಷ್ಟು ಬೇಗನೇ ಪುನರ್ ಒದಗಿಸಲು ತಂಡಗಳನ್ನು ರಚಿಸಬೇಕು. ಪ್ರಸ್ತುತ 3ಬೋಟ್‍ಗಳು ಜಿಲ್ಲಾಡಳಿತದಲ್ಲಿ ಲಭ್ಯವಿದ್ದು, ಇನ್ನಷ್ಟು ಅಗತ್ಯ ಬೋಟ್‍ಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ನಗರ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯವನ್ನು ಮಳೆಗಾಲಕ್ಕಿಂತ ಮೊದಲೇ ಪೂರ್ಣಗೊಳಿಸಬೇಕು. ಜಾನುವಾರು, ಮಾನವ ಪ್ರಾಣ ಹಾನಿ ಸಂಭವಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ 24ಗಂಟೆ ಒಳಗಾಗಿ ಪರಿಹಾರದ ಮೊತ್ತವನ್ನು ನೀಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು