ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮರಾಜನಗರದಲ್ಲಿ ಕಳೆದ 107 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಬುಧವಾರ ಕೂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಭಿತ್ತಿಪತ್ರ ಹರಿದು ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ .ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಶ್ರೀನಿವಾಸಗೌಡ ಮಾತನಾಡಿ, ಮುಂದಿನ ವರ್ಷದ ಜನವರಿ ಅಂತ್ಯದವರೆಗೂ ನಿತ್ಯ 1030 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸರ್ಕಾರಕ್ಕೆ ಸೂಚಿಸಿರುವುದು ತಿಳಿದು ಬಂದಿದೆ ಇದು ಅತ್ಯಂತ ಖಂಡನೀಯವಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿಯು ಪದೇಪದೇ ತಮಿಳುನಾಡಿನ ಪರ ತೀರ್ಪು ನೀಡುತ್ತಿದ್ದು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಶೀಲಿಸಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಾರಂಭದಿಂದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿಕೊಂಡು ಬರುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೇಂದ್ರ ಸರ್ಕಾರ ವಜಾಗೊಳಿಸಬೇಕು. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು.ಇಲ್ಲಿದ್ದಿಧರೆ ನಿರಂತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.