ಚಾಮರಾಜನಗರ: ಪೂಜಾರಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಗರ್ಭವತಿಯನ್ನಾಗಿ ಮಾಡಿದ ಘಟನೆ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಡಗುಳಿ ಗ್ರಾಮದಲ್ಲಿ ನಡೆದಿದೆ.
ಬಾಲಕಿ ಸೋಲಿಗ ಸಮುದಾಯದವಳಾಗಿದ್ದು, 17ವರ್ಷ ವಯಸ್ಸಿನವಳಾಗಿದ್ದಾಳೆ. ಈಕೆಯನ್ನು ಅದೇ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಪೂಜಾರಿ ರವಿ(23) ಎಂಬಾತ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದು ಆಕೆ ಗರ್ಭಿಣಿಯಾಗಿದ್ದಾಳೆ. ಈ ಬಗ್ಗೆ ಬಾಲಕಿಯ ಯಾರಿಗೂ ತಿಳಿಸದ ಕಾರಣ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಳು.
ಈ ನಡುವೆ ಆಶಾ ಕಾರ್ಯಕರ್ತೆ ಹಾಗೂ ಪಿಡಿಓ ಗ್ರಾಮದಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾಗ ಬಾಲಕಿ ಕಣ್ಣಿಗೆ ಬಿದ್ದಿದ್ದು ಆಕೆಯ ಹೊಟ್ಟೆ ದಪ್ಪವಾಗಿದ್ದರಿಂದ ವಯಸ್ಸು ಕೇಳಿದ್ದಾರೆ. ತನಗೆ 17 ವರ್ಷವಾಗಿದ್ದು, ತನಗಿನ್ನೂ ಮದುವೆಯಾಗಿಲ್ಲ ಎಂದು ಬಾಲಕಿ ಹೇಳುತ್ತಿದ್ದಂತೆ ಆಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ 7 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿದೆ. ಇದಕ್ಕೆ ಕಾರಣ ಯಾರೆಂದು ವಿಚಾರಿಸಿದಾಗ ಅದೇ ಗ್ರಾಮದ ಪೂಜಾರಿ ರವಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ.
ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತೆಯನ್ನು ಬಾಲಕಿಯರ ಬಾಲಮಂದಿರದ ವಶಕ್ಕೆ ನೀಡಲಾಗಿದೆ.