ಚಾಮರಾಜನಗರ: ಗಂಡ ಮಲಗಿದ್ದ ರೂಮಿನ ಬಾಗಿಲ ಚಿಲಕ ಹಾಕಿಕೊಂಡು ಪತ್ನಿ ತಡರಾತ್ರಿ ನಾಪತ್ತೆಯಾಗಿರುವ ವಿಚಿತ್ರ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿಯಲ್ಲಿ ನಡೆದಿದೆ.
ದೊಡ್ಡಿಂದುವಾಡಿ ಗ್ರಾಮದ ವಿಜಯ್ ಎಂಬುವರ ಪತ್ನಿ ಜ್ಯೋತಿ(20) ನಾಪತ್ತೆಯಾದ ಗೃಹಿಣಿ. ಈಕೆ ಡಿ.24 ರಂದು ರಾತ್ರಿ ಊಟ ಮಾಡಿ ಪತಿಯೊಂದಿಗೆ ಕೊಠಡಿಯಲ್ಲಿ ಮಲಗಿದ್ದಳು. ಮಧ್ಯರಾತ್ರಿ ಪತಿ ನಿದ್ದೆಗೆ ಜಾರಿದ್ದನ್ನು ಗಮನಿಸಿದ ಜ್ಯೋತಿ ಕೊಠಡಿಯ ಬಾಗಿಲಿನ ಚಿಲಕ ಹಾಕಿಕೊಂಡು ಹೊರಟು ಹೋಗಿದ್ದಾಳೆ.
ಇತ್ತ ಮಧ್ಯರಾತ್ರಿ ವಿಜಯ್ ಗೆ ಎಚ್ಚರವಾಗಿ ನೋಡಿದಾಗ ಪಕ್ಕದಲ್ಲಿ ಮಲಗಿದ್ದ ಪತ್ನಿ ಜ್ಯೋತಿ ಕಾಣಲಿಲ್ಲ. ಎದ್ದು ಕೊಠಡಿಯ ಬಾಗಿಲು ತೆರೆಯೋಣ ಎಂದು ನೋಡಿದಾಗ ಹೊರಗಿನಿಂದ ಕೊಠಡಿಯ ಚಿಲಕ ಹಾಕಿಕೊಂಡು ಹೋಗಿರುವುದು ಗೊತ್ತಾಗಿದೆ. ಮನೆಯವರ ಸಹಾಯದಿಂದ ಬಾಗಿಲು ತೆರೆದು ಎಲ್ಲಡೆ ಹುಡುಕಾಡಿದರೂ ಸುಳಿವು ಸಿಗದ ಕಾರಣ ನಾಪತ್ತೆಯಾದ ಪತ್ನಿಯನ್ನು ಹುಡುಕಿಕೊಡುವಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.