Bengaluru 26°C
Ad

ಪಿಲಿಕುಳ ನಿಸರ್ಗಧಾಮದ ಅರ್ಬನ್‌ ಹಾಥ್‌ನಲ್ಲಿ 2 ದಿನ ಹಣ್ಣುಗಳ ಉತ್ಸವ, ಹಲಸು ಮೇಳ

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪಿಲಿಕುಳ ನಿಸರ್ಗಧಾಮದ ಅರ್ಬನ್‌ ಹಾಥ್‌ನಲ್ಲಿ ಎರಡು ದಿನಗಳ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ ಶನಿವಾರ ಆರಂಭಗೊಂಡಿದ್ದು, ಭಾನುವಾರವೂ ಮೇಳ ಮುಂದುವರಿಯಲಿದೆ.

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪಿಲಿಕುಳ ನಿಸರ್ಗಧಾಮದ ಅರ್ಬನ್‌ ಹಾಥ್‌ನಲ್ಲಿ ಎರಡು ದಿನಗಳ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ ಶನಿವಾರ ಆರಂಭಗೊಂಡಿದ್ದು, ಭಾನುವಾರವೂ ಮೇಳ ಮುಂದುವರಿಯಲಿದೆ.

ಅರ್ಬನ್‌ ಹಾಥ್‌ನ ವಿಶಾಲವಾದ ಪ್ರದೇಶದಲ್ಲಿ ಬಗೆಬಗೆಯ ಹಣ್ಣುಗಳು, ವಿವಿಧೆಡೆಗಳ ಹಲಸಿನ ಮಳಿಗೆಗಳನ್ನು ಹಾಕಲಾಗಿದೆ. ರಾಸಾಯನಿಕವಿಲ್ಲದೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಇಲ್ಲಿ ಗ್ರಾಹಕರಿಗೆ ಲಭ್ಯ. ಆದರೆ ಮೇಳದಲ್ಲಿ ಹಲಸಿನ ಮಳಿಗೆಗಳ ಸಂಖ್ಯೆ ಕೊಂಚ ಕಡಿಮೆ ಇರುವುದು ಕಂಡು ಬಂತು.

ಹಲಸು ಸೇರಿದಂತೆ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳು, ಸ್ಥಳದಲ್ಲೇ ಹಲಸು ಹಾಗೂ ಅದರಿಂದ ಮಾಡುವ ರುಚಿಕರವಾದ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

H

ಇದರ ಜತೆಗೆ ವೈವಿಧ್ಯಮಯ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ದೇಸಿ ಉತ್ಪನ್ನಗಳು, ಮಕ್ಕಳ ಆಟಿಕೆಗಳು, ತಿಂಡಿ- ಪಾನೀಯ, ಐಸ್‌ಕ್ರೀಮ್‌, ಬಟ್ಟೆಗಳು, ಇತರ ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಕೂಡ ಮೇಳದ ಆಕರ್ಷಣೆಯನ್ನು ಹೆಚ್ಚಿಸಿವೆ.

ಜತೆಗೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಸಸ್ಯಗಳ ಹಲವು ಮಳಿಗೆಗಳಿವೆ. ಹಲವೆಡೆಗಳ ನರ್ಸರಿಗಳಿಂದ ಸಣ್ಣ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಕುಶಾಲನಗರದ ಅಫ್ತಾಬ್‌ ಎಂಬವರು ಬದನೆಯ 238 ತಳಿ, ಮೂಲಂಗಿಯ 15, ಅಲಸಂಡೆ ಹಾಗೂ ಬೆಂಡೆಕಾಯಿಯ ತಲಾ 40 ತಳಿಗಳು, ಸೋರೆಕಾಯಿಯ 20 ತಳಿ, ಟೊಮೋಟೋ 100, ಮೆಣಸಿನಕಾಯಿ 70, ಕುಂಬಳಕಾಯಿಯ 20 ತಳಿಗಳ ಬೀಜಗಳನ್ನು ಸಂರಕ್ಷಿಸಿದ್ದಾರೆ.

H (1)

ಈ ಬೀಜಗಳನ್ನು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ಅವುಗಳನ್ನು ಬೆಳೆಸಿ, ಈ ಬೀಜ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವ ಕುರಿತು ಸಲಹೆಗಳನ್ನೂ ನೀಡುತ್ತಿದ್ದಾರೆ.

ಶನಿವಾರ ಮಳೆ ಕಡಿಮೆ ಇದ್ದು ಮೋಡ ಕವಿದು ವಾತಾವರಣ ಆಹ್ಲಾದಕರವಾಗಿದ್ದರೂ ನಿರೀಕ್ಷೆಯಷ್ಟು ಜನರು ಆಗಮಿಸಿಲ್ಲ. ಕೆಲವು ಮಾರಾಟಗಾರರಿಗೆ ಮಧ್ಯಾಹ್ನವರೆಗೆ ವ್ಯಾಪಾರ ಆರಂಭವಾಗಿರಲಿಲ್ಲ. ಭಾನುವಾರ ಜಾಸ್ತಿ ಜನರು ಆಗಮಿಸುವ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

Ad
Ad
Nk Channel Final 21 09 2023
Ad