News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ | ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ: ಸೇತುರಾಮ್

AncheKuncha
Photo Credit : News Kannada

ಬೆಳ್ತಂಗಡಿ: ಭಾರತದಲ್ಲಿ ತಲೆತಲಾಂತರಗಳಿಂದ ಬಂದಿರುವ ಜ್ಞಾನವನ್ನು ಉಳಿಸಿಕೊಂಡು ಬಂದಿರುವುದು ಧರ್ಮಕ್ಷೇತ್ರಗಳೇ ಹೊರತು ಸರಕಾರಗಳಲ್ಲ ಎಂದು ನಟ, ನಿರ್ದೇಶಕ, ನಾಟಕಕಾರ ಎಸ್.ಎನ್.ಸೇತುರಾಮ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಸಾರ್ವಜನಿಕ ಶಿಕ್ಷಣವಿಲಾಖೆ ಇವರ ಸಹಯೋಗದಲ್ಲಿ 28 ನೇ ವರ್ಷದ, 2022 ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳಾದ ಜ್ಞಾನವಿಕಾಸ ಮತ್ತು ಜ್ಞಾನಪ್ರಕಾಶ ಇವುಗಳ ಲೋಕಾರ್ಪಣೆ ಸಮಾರಂಭ ಹಾಗೂ 19 ನೇ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವಾಗಿದೆ. ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ. ಎಲ್ಲವೂ ಒಂದೇ ಆಗಿದೆ. ಆದರೆ ಕಾನೂನಿನಲ್ಲಿ ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ಬೇರೆ ಬೇರೆಯಾಗಿದ್ದು, ಅನೈತಿಕತೆ ಅಪರಾಧ ಅಲ್ಲ ಎಂಬ ಭಾವನೆ ಈಗ ಮೂಡಿ ಬಂದಿದೆ. ಪರಸ್ಪರ ಪ್ರೀತಿ-ವಿಶ್ವಾಸದಿಂದ, ಕೃತಜ್ಞತೆ ಹಾಗೂ ಗೌರವದಿಂದ ಬದುಕುವ ಸಭ್ಯ, ಸುಸಂಸ್ಕøತ ನಾಗರಿಕರೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದೆ.

ಇಂದು ಎಲ್ಲೆಲ್ಲೂ ನೈತಿಕತೆ, ಸತ್ಯ, ಸಭ್ಯತೆ ಕುಸಿದಿದೆ. ಬದುಕುವುದು ನಮ್ಮ ಹಕ್ಕಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ, ಪರಸ್ಪರ ಹೊಂದಿಕೊಂಡು ಗೌರವಪೂರ್ವಕವಾಗಿ ಕೃತಜ್ಞತೆಯೊಂದಿಗೆ ಸಾರ್ಥಕ ಜೀವನ ಮಾಡುವುದು ನಮ್ಮ ಉದ್ದೇಶವಾಗಬೇಕು. ಇಂತಹ ನೈತಿಕ ಮೌಲ್ಯಾಧಾರಿತ ಪುಸ್ತಕಗಳಿಂದ ಸಭ್ಯ, ಸುಸಂಸ್ಕøತ ನಾಗರಿಕರು ಮೂಡಿ ಬರಲು ಸಾಧ್ಯ ಎಂದು ಅವರು ಹೇಳಿದರು.

ಧರ್ಮಸ್ಥಳದಲ್ಲಿರುವ ಸ್ವಚ್ಛತೆ, ಶಿಸ್ತು, ಸಂಯಮ, ಅತಿಥಿ ಸತ್ಕಾರ, ಸೇವೆ, ಕರುಣೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳು ವಿಶ್ವಮಾನ್ಯವಾಗಿವೆ ಎಂದರು.

ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ನೀಡಿ ಅಭಿನಂದಿಸಿದ ಸಿನಿಮಾ ನಟ ಮಾಸ್ಟರ್ ಆನಂದ್ ಮಾತನಾಡಿ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳ ದರ್ಶನದಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಈ ವರೆಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆ ಸಾರ್ಥಕ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು. ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ, ಜ್ಞಾನ ಸಂಗ್ರಹದೊಂದಿಗೆ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಪ್ರತಿಭಾ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಪ್ರಚಲಿತವಿದೆ. ಇಲ್ಲಿ ಮಾತೇ ಮಾಣಿಕ್ಯ. ಸತ್ಯ, ಧರ್ಮ, ನ್ಯಾಯ, ನೀತಿಯೊಂದಿಗೆ ಎಲ್ಲರೂ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕ ಅಂಜನೀ ಕಶ್ಯಪ್, ಶಿಕ್ಷಣ ಇಲಾಖೆಯ ಸಹನಿರ್ದೇೀಶಕ ಎಸ್.ಜಿ. ನಾಗೇಶ್, ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾl ಐ ಶಶಿಕಾಂತ ಜೈನ್ ಸ್ವಾಗತಿಸಿದರು.ಯೋಗ ಸಂಘಟಕ ಚೆನ್ನ ಕೇಶವ ಡಿ.ಆರ್. ಪುರಸ್ಕೃತರ ಪಟ್ಟಿ ವಾಚಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿ ಸ್ವಸ್ತಿ ಮಂತ್ರ ಪಠಿಸಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಉಡುಪಿಯ ವಿದೂಷಿ ಸಂಗೀತ ಬಾಲಚಂದ್ರ ಅವರು ಹಾಡಿದ ರಾಷ್ಟ್ರಕವಿ ಕುವೆಂಪು ಅವರ ಆನಂದಮಯ ಈ ಜಗ ಹೃದಯ ಎಂಬ ಗೀತೆಗೆ ಬಂಟ್ವಾಳದ ಮುರಳೀಧರ ಆಚಾರ್ ಅವರು ಕುಂಚದ ಮೂಲಕ ಆಕರ್ಷಕ ಕಲಾಕೃತಿಯನ್ನು ರಚಿಸಿದರು. ಇದೇ ಹಾಡಿಗೆ ಪುತ್ತೂರಿನ ನಾಟ್ಯರಂಗದ ವಿದೂಷಿ ಮಂಜುಳ ಸುಬ್ರಹ್ಮಣ್ಯ ಮತ್ತು ಬಳಗದವರು ನೃತ್ಯ ನಿರೂಪಿಸಿದರು.ವಂಶಿಕ ಕಶ್ಯಪ್ ಅವರೊಂದಿಗೆ ಮಕ್ಕಳು ಸಂವಾದ ನಡೆಸಿದರು.

೧೯ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರು

ಪ್ರಾಥಮಿಕ ಶಾಲಾ ವಿಭಾಗ: ಉರ್ವ ಕೆನರಾ ಹಿ.ಪ್ರಾ.ಶಾಲೆಯ ಅನ್ವಿತ್ ಹರೀಶ್(ಪ್ರ)., ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಅಟ್ಟೂರು(ದ್ವಿ)., ಸಕಲೇಶಪುರ ಜಿ.ಎಸ್.ಎಸ್. ಪಬ್ಲಿಕ್ ಶಾಲೆಯ ಮೋಶ್ರಿತ್ ಎಸ್.(ತೃ).
ಪ್ರೌಢ ಶಾಲಾ ವಿಭಾಗ : ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಕೆ. ಪ್ರತೀಷ್ಠಾ ಶೇಟ್(ಪ್ರ)., ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮಾ ಶಾಲೆಯ ಸಂದೀಪ್ ಆರ್.ಪೈ(ದ್ವಿ)., ಕಾರ್ಕಳ ಬೆಳ್ಮಣ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಶರಣ್ಯ ತಂತ್ರಿ(ತೃ).

ಕಾಲೇಜು ವಿಭಾಗ: ಅಳಿಕೆ ಶ್ರೀ ಸತ್ಯಸಾಯಿ ಪ.ಪೂ. ಕಾಲೇಜಿನ ಅಖಿಲೇಶ್ ನಾಗೇಶ್ ನಾಯ್ಕ್(ಪ್ರ)., ಕಾರವಾರ ಟಾಗೂರ ಸ್ಕೂಲ್ ಆಫ್ ಆರ್ಟ್‌ನ ಲಕ್ಷ್ಮೀಕಾಂತ್ ವಾಸುದೇವ ನಾಯ್ಕ್(ದ್ವಿ), ಅಂಕೋಲಾದ ಪ್ರಸಾದ ಶ್ರೀಧರ ಮೇತ್ರಿ(ತೃ).

ಸಾರ್ವಜನಿಕ ವಿಭಾಗ : ಮಂಗಳೂರು ಕೊಂಚಾಡಿ ಗುರುನಗರದ ಬಿ.ಕೆ. ಮಾಧವ ರಾವ್(ಪ್ರ), ಕಾರ್ಕಳ ಅಜೆಕಾರು ಪ್ರಿಯಾ ಶೆಟ್ಟಿ(ದ್ವಿ), ಹೊಸನಗರ ನಾಗರಕೊಡಿಗೆ ತ್ರಿಣಿವೆಯ ಪೂರ್ಣಿಮಾ ಜಿ.ಎಸ್.(ತೃ).ವಿಶೇಷ ಪುರಸ್ಕಾರ: ಅಂಕೋಲಾ ಆವರ್ಸಾದ ದಿನೇಶ್ ದೇವರಾಯ ಮೇತ್ರಿ

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ೧೯೯೩ರಿಂದ ೨೦೨೧ರವರೆಗೆ ಅಂದರೆ ೨೭ ವರ್ಷಗಳಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳು ಪ್ರಕಟಗೊಂಡಿದೆ. ೨೧,೧೬,೦೦,೦೦೦ ಪ್ರತಿಗಳು ದ.ಕ., ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಶಾಲೆಗಳಿಗೆ ವಿತರಣೆಯಾಗಿದೆ. ಇದೀಗ ೨೦೨೨ರಲ್ಲಿ ೨೮ನೇ ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ’ಜ್ಞಾನ ವಿಕಾಸ’ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ’ಜ್ಞಾನ ಪ್ರಕಾಶ’ ನೈತಿಕ ಮೌಲ್ಯಾಧಾರಿತ ಒಂದು ಲಕ್ಷ ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು.

ಕಳೆದ ೧೮ ವರ್ಷಗಳಿಂದ ರಾಜ್ಯ ಮಟ್ಟದ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆಗಳು ನಡೆದಿದ್ದು, ೨,೨೨,೭೧೮ ಸ್ಪರ್ಧಾರ್ಧಿಗಳು ಭಾಗವಹಿಸಿದ್ದಾರೆ. ೨೦೨೧-೨೨ನೇ ವರ್ಷದಲ್ಲಿ ’ಕುಡಿತದ ಕೆಡುಕು’ ವಿಷಯಾಧಾರಿತ ಅಂಚೆ-ಕುಂಚ ಸ್ಪರ್ಧೆಯಲ್ಲಿ ೧೫,೨೦೦ ಮಂದಿ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕ ಒಟ್ಟು ೪ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲದೆ ಪ್ರತಿ ವಿಭಾಗಗಳಿಂದ ೨೫ ಪ್ರೋತ್ಸಾಹಕರ ಬಹುಮಾನ ನೀಡಲಾಗಿದೆ. ಈ ವರೆಗೆ ಒಟ್ಟು ೨,೩೭,೯೩೮ ಸ್ಪರ್ಧಿಗಳು ರಾಜ್ಯಮಟ್ಟದ ಅಂಚೆ-ಕುಂಚದಲ್ಲಿ ಭಾಗವಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು